ಮಂಗಳೂರು : ಕರಾವಳಿಯನ್ನೇ ತಲ್ಲಣಗೊಳಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಬಾಲಕನ ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಿದೆ. ಬಾಲಕನನ್ನು ಅಪಹರಣ ಮಾಡಿದ್ದ 6 ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ಸಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ರಥಬೀದಿಯ ಬಳಿಯಲ್ಲಿರುವ ಮನೆಯಲ್ಲಿ ಆಟವಾಡುತ್ತಿದ್ದ 8 ವರ್ಷದ ಬಾಲಕ ಅನುಭವ್ ಎಂಬ ಬಾಲಕನನ್ನು ಇಂಡಿಕಾ ಕಾರಿನಲ್ಲಿ ಅಪಹರಣ ಮಾಡಲಾಗಿತ್ತು. ಬಾಲಕನ ಅಜ್ಜ ಎ.ಕೆ.ಶಿವನ್ ಕೂಡ ಅದೇ ಜಾಗದಲ್ಲಿ ವಾಕಿಂಗ್ ಮಾಡುತ್ತಿದ್ದರು. ಇದೇ ವೇಳೆ, ಅಪಹರಣ ನಡೆದಿದ್ದು ಬೊಬ್ಬೆ ಹೊಡೆಯುತ್ತಲೇ ಬಾಲಕನನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿ ಪರಾರಿಯಾಗಿದ್ದಾರೆ. ನಂತದಲ್ಲಿ ಬಾಲಕನ ತಂದೆ ಬಿಯೋಯ್ ಗೆ ಕರೆ ಮಾಡಿ ಬರೋಬ್ಬರಿ 100 ಬಿಟ್ ಕಾಯಿನ್ (17 ಕೋಟಿ) ಡಿಮ್ಯಾಂಡ್ ಇಟ್ಟಿದ್ದರು. ಯಾವುದೇ ಕಾರಣಕ್ಕೂ ಪೊಲೀಸರಿಗೆ ದೂರು ನೀಡುವಂತಿಲ್ಲ. ದೂರು ನೀಡಿದ್ರೆ ಅನುಭವಿಸುತ್ತೀರಿ ಎಂದು ಮೆಸೆಜ್ ಹಾಕಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀನಾರಾಯಣ ಅವರು ಒಟ್ಟು 4 ವಿಶೇಷ ತಂಡವನ್ನು ರಚಿಸಿದ್ದರು. ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಸಹಕಾರದೊಂದಿಗೆ ಮಂಗಳೂರು ಪೊಲಿಸರು ಕಾರ್ಯಾಚರಣೆಯನ್ನು ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯ ಕೋಮಲ್, ಮಂಡ್ಯದ ಗಂಗಾಧರ್, ಹಾಗೂ ಕಿಡ್ಯಾಪರ್ಸ್ ಗೆ ಸಹಕಾರ ನೀಡಿದ್ದ ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ್, ಮಹೇಶ್, ಮಂಡ್ಯದ ಮತ್ತಿಬ್ಬರು ಸೇರಿ ಒಟ್ಟು 6 ಆರೋಪಿಗಳನ್ನು ಬಂಧಿಸಲಾಗಿದೆ.
ಕಿಡ್ನಾಪ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ದಕ್ಷಿಣ ಕನ್ನಡ ಎಸ್ಪಿ ಲಕ್ಷ್ಮೀ ನಾರಾಯಣ್ ಖುದ್ದು ಬಾಲಕನ ಮನೆಗೆ ಭೇಟಿ ನೀಡಿದ್ದರು. ಮನೆಯವರಿಂದ ಮಾಹಿತಿಯನ್ನು ಪಡೆದು, ಪೊಲೀಸರ ವಿಶೇಷ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಆರಂಭದಲ್ಲಿ ಹಾಸನದಲ್ಲಿ ಕಿಡ್ನಾಪರ್ಸ್ ಮೊಬೈಲ್ ಟ್ರೇಸ್ ಆಗಿತ್ತು. ಹೀಗಾಗಿ ಬೆಂಗಳೂರು ಮೂಲಕ ಕೋಲಾರ್ ಗೆ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿತ್ತು. ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಾಕಾಬಂಧಿ ಹಾಕಲಾಗಿತ್ತು. ಅಪಹರಣಕಾರರ ಸುಳಿವು ಲಭಿಸದೇ ಇದ್ದರೂ ಕೂಡ ವಾಟ್ಸಾಪ್ ಮೂಲಕ ಸಂಭಾಷಣೆಯನ್ನು ಮುಂದುವರಿಸಿದ್ದಾರೆ. ಡಿಜಿಟಲ್ ರೂಪದಲ್ಲಿ ಹಣ ನೀಡಿದ್ರೆ ಬಾಲಕನ್ನು ಬಿಟ್ಟು ಬಿಡುವುದಾಗಿಯೂ ಹೇಳಿದ್ದಾರೆ. ಅಂತಿಮವಾಗಿ ಕೋಲಾರದಲ್ಲಿ ಆರೋಪಿಗಳು ಪತ್ತೆಯಾಗಿದ್ದಾರೆ.
ಕೋಮಲ್ ಹಾಗೂ ಮಹೇಶ್ ಸ್ನೇಹಿತರು ಸೇರಿ ಅನುಭವ್ ಕಿಡ್ನ್ಯಾಪ್ ಮಾಡಿದ್ದರು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಟ್ಯಾಂಕರ್ ಡ್ರೈವರ್ ಆಗಿದ್ದ ಮಹೇಶ್ಗೆ ಕೋಮಲ್ ಪರಿಚಯ. ಕಳೆದ ರಾತ್ರಿಯಷ್ಟೇ ಕೋಲಾರದ ಕೂರ್ನಹೊಸಳ್ಳಿ ಗ್ರಾಮಕ್ಕೆ ಮಗುವಿನೊಂದಿಗೆ ಕಿಡ್ಯಾಪರ್ಸ್ ಬಂದಿದ್ದರು. ಈ ವೇಳೆ ಕಿಡ್ನ್ಯಾಪರ್ಸ್ ಗ್ರಾಮದ ಮಂಜುನಾಥ್ ಎಂಬುವರ ಮೊಬೈಲ್ ಬಳಸಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಟ್ರ್ಯಾಕ್ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಿಪಿಐ ಸಂದೇಶ್, ಪಿ.ಎಸ್.ಐ ನೇತೃತ್ವದ ತಂಡದಿಂದ ಈ ಪ್ರಕರಣ ಸುಖಾಂತ್ಯ ಕಂಡಿದೆ. ಡಿ.19ರಂದು ಮೆಡಿಕಲ್ ಚಕಪ್ ಮಾಡಿ ಬಳಿಕ ಅನುಭವ್ನನ್ನು ಮಾಲೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತದೆ. ನಂತರ ಅಪಹರಣಕಾರರನ್ನು ಅಲ್ಲಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕರೆತರಲಾಗುತ್ತದೆ.
ಕರಾವಳಿಯಲ್ಲಿ ಸಕ್ರೀಯವಾಗಿದೆಯಾ ಬಿಟ್ ಕಾಯಿನ್ ದಂಧೆ ..!
ಅನುಭವ್ ಅಪಹರಣದ ಬೆನ್ನಲ್ಲೇ ಬಿಟ್ ಕಾಯಿನ್ ಅನುಮಾನ ವ್ಯಕ್ತವಾಗಿದೆ. ಬಾಲಕನ ಅಜ್ಜ ಎ.ಕೆ.ಶಿವನ್ ಈ ಹಿಂದೆ ಸೇನೆಯಲ್ಲಿ ಅಧಿಕಾರಿಯಾಗಿದ್ದು ನಿವೃತ್ತರಾಗಿದ್ದಾರೆ. ಉಜಿರೆಯಲ್ಲಿ ಮಗನ ಜೊತೆಗೆ ವಹಿವಾಟು ನಡೆಸುತ್ತಿದ್ದಾರೆ. ಬಾಲಕನನ್ನು ಅಪಹರಿಸಿ ಬಿಟ್ ಕಾಯಿನ್ ನೀಡುವಂತೆ ಡಿಮ್ಯಾಂಡ್ ಇಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ.
ವಿಶ್ವದ ಹಲವು ರಾಷ್ಟ್ರಗಳಲ್ಲಿ ಬಿಟ್ ಕಾಯಿನ್ ಗೆ ಕಾನೂನಿನ ಮಾನ್ಯತೆ ಸಿಕ್ಕಿದೆ. ಆದರೆ ದೇಶದಲ್ಲಿ ಬಿಟ್ ಕಾಯಿನ್ ವ್ಯವಹಾರ ನಿಷೇಧಿತ. ಆದರೂ ಬಿಟ್ ಕಾಯಿನ್ ಗೆ ಭಾರತೀಯ ಕರೆನ್ಸಿಗೆ ಹೋಲಿಸಿದ್ರೆ ಬರೊಬ್ಬರಿ 17 ಲಕ್ಷ ರೂಪಾಯಿ ಆಗುತ್ತದೆ. ಕಳೆದೈದು ವರ್ಷಗಳಿಂದೀಚೆಗೆ ಬಿಟ್ ಕಾಯಿಗೆ ಬೆಲೆ ಸಾಕಷ್ಟು ಏರಿಕೆಯಾಗಿದೆ. ಅಪಹರಣಕಾರರು 100 ಬಿಟ್ ಕಾಯಿನ್ ಗೆ ಡಿಮ್ಯಾಂಟ್ ಇಟ್ಟಿದ್ದರು. 100 ಬಿಟ್ ಕಾಯಿನ್ ಅಂದ್ರೆ ಸರಾಸರಿ 17 ಕೋಟಿ ರೂಪಾಯಿ. ಬಿಟ್ ಕಾಯಿನ್ ಡಿಜಿಟಲ್ ರೂಪವನ್ನು ಹೊಂದಿರುವುದರಿಂದಾಗಿ ವಿದೇಶಿ ದಂಧೆಕೋರರು ತಮ್ಮ ದಂಧೆಗೆ ಇದೇ ಡಿಜಿಟಲ್ ಹಣವನ್ನೇ ಬಳಕೆ ಮಾಡುತ್ತಿದ್ದಾರೆ. ಇದೀಗ ಬಾಲಕನ ಅಪಹರಣದಲ್ಲಿಯೂ ಬಿಟ್ ಕಾಯಿನ್ ಹೆಸರು ಕೇಳಿಬಂದಿದೆ.
ಬಾಲಕ ಅನುಭವ್ ಮನೆಯಲ್ಲಿ ಬಿಟ್ ಕಾಯಿನ್ ವ್ಯವಹಾರ ನಡೆಸಲಾಗುತ್ತಿದ್ಯಾ ? ಬಾಲಕನ ತಂದೆ ಅಥವಾ ಅಜ್ಜ ಈ ಬಿಟ್ ಕಾಯಿನ್ ಖರೀದಿಸಿ ಇಟ್ಟಿದ್ದರೇ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಬಿಟ್ ಕಾಯಿನ್ ವಹಿವಾಟನ್ನು ಬಾಲಕನ ಮನೆಯವರು ಮಾಡುತ್ತಿರುವ ವಿಚಾರ ತಿಳಿದುಕೊಂಡೇ ಈ ಡಿಮ್ಯಾಂಡ್ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಕೂಡ ಪೊಲೀಸರು ತನಿಖೆಯನ್ನು ನಡೆಸುವ ಸಾಧ್ಯತೆಯಿದೆ.