ಅಂಗಡಿ ಸ್ಥಾನಕ್ಕೆ ಮುತಾಲಿಕ ಕಣ್ಣು…! ನಾನು ಟಿಕೇಟ್ ಆಕಾಂಕ್ಷಿ ಎಂದ ಹಿಂದುತ್ವ ಹೋರಾಟಗಾರ…!!

ಬೆಳಗಾವಿ: ಕೊರೋನಾಕ್ಕೆ ಬಲಿಯಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಸ್ಥಾನಕ್ಕಾಗಿ ಬಿಜೆಪಿ ಯಲ್ಲಿ ಪೈಪೋಟಿ ತೀವ್ರಗೊಂಡಿರುವ ಬೆನ್ನಲ್ಲೇ ನಾನು ಟಿಕೇಟ್ ಆಕಾಂಕ್ಷಿ ಎಂದು ಹಿಂದುತ್ವವಾದಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಅಚ್ಚರಿಯ ಬೆಳವಣಿಗೆಯಲ್ಲಿ ಪ್ರಮೋದ್ ಮುತಾಲಿಕ ರಾಜಕೀಯಕ್ಕೆ ಧುಮುಕುವ ನಿರ್ಣಯ ಕೈಗೊಂಡಿದ್ದು, ನಾನು ರಾಜಕೀಯಕ್ಕೆ ಬರುವ ಕನಸಿನಲ್ಲಿದ್ದೇನೆ. ಹೀಗಾಗಿ ಬೆಳಗಾವಿಯಿಂದ ಅಂಗಡಿಯವರ ಸ್ಥಾನಕ್ಕೆ ನಾನು ಟಿಕೇಟ್ ಆಕಾಂಕ್ಷಿಯಾಗಿದ್ದೇನೆ ಎಂದು ಮುತಾಲಿಕ್ ಹೇಳಿದ್ದಾರೆ.

ಬೆಳಗಾವಿ ನನ್ನ ಕರ್ಮಭೂಮಿ. ನಾನು ಹೋರಾಟವನ್ನು ಆರಂಭಿಸಿದ್ದು ಬೆಳಗಾವಿಯಲ್ಲೇ. ತುರ್ತು ಪರಿಸ್ಥಿತಿಯಲ್ಲಿ ನಾನು ಇಲ್ಲೇ ಹೋರಾಟ ಮಾಡಿ ಜೈಲಿಗೂ ಹೋಗಿದ್ದೇನೆ. ಹೀಗಾಗಿ ನಾನು ಬೆಳಗಾವಿ ಜನರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ‌ ಲೋಕಸಭಾ ಸದಸ್ಯನಾಗಲು ಇಚ್ಛಿಸುತ್ತೇನೆ ಎಂದಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಮುತಾಲಿಕ್, ನಾನು ಟಿಕೇಟ್ ಆಕಾಂಕ್ಷಿಯಾಗಿರುವುದರಿಂದ ಈಗಾಗಲೇ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ್ದೇನೆ.

ಸಿಎಂ‌ಬಿಎಸ್ವೈ, ಹಿರಿಯ ಸಚಿವ ಈಶ್ವರಪ್ಪ, ಜಗದೀಶ್ ಶೆಟ್ಟರ್ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರ ಜೊತೆಗೂ ಮಾತುಕತೆ ನಡೆಸಿದ್ದೇನೆ. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದಿದ್ದು ಟಿಕೇಟ್ ಸಿಗುವ ಭರವಸೆಯಲ್ಲಿದ್ದಾರೆ.

ಇನ್ನೊಂದೆಡೆ ಅಂಗಡಿ ಸ್ಥಾನಕ್ಕೆ ಶೆಟ್ಟರ್ ಚುನಾವಣೆ ಗೆ ನಿಲ್ಲಿಸಿ ಗೆಲ್ಲಿಸಿಕೊಂಡು ಕೇಂದ್ರ ಸಚಿವರನ್ನಾಗಿಸುವ ಲೆಕ್ಕಾಚಾರ ಬಿಜೆಪಿಯಲ್ಲಿದೆ ಎನ್ನಲಾಗಿದ್ದು, ಮುತಾಲಿಕ್ ಕೂಡ ಟಿಕೇಟ್ ಆಕಾಂಕ್ಷಿಯಾಗಿರೋದರಿಂದ ಬಿಜೆಪಿ ಪಾಲಿಗೆ ಬೆಳಗಾವಿ ಟಿಕೇಟ್ ಹಂಚಿಕೆ ತಲೆನೋವಾದ್ರು ಅಚ್ಚರಿ ಏನಿಲ್ಲ

Comments are closed.