ಕುಂದಾಪುರ : ಕಳೆದೊಂದು ದಶಕಗಳಿಂದಲೂ ಕುಂದಾಪುರ ಜನತೆ ಶಾಸ್ತ್ರೀ ಪಾರ್ಕ್ ಬಳಿ ಹಾದು ಹೋಗಿರೋ ಪ್ಲೈವರ್ ಕಾಮಗಾರಿ ಪೂರ್ಣಗೊಳಿಸಲು ಹೋರಾಟ ನಡೆಸುತ್ತಿದ್ದಾರೆ. ಆದ್ರೆ ಕೊನೆಗೂ ಪ್ಲೈಓವರ್ ಮೇಲೆ ವಾಹನ ಸಂಚರಿಸೋ ಕಾಲ ಸನ್ನಿಹಿತವಾಗಿದೆ. ಇದೀಗ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ ಅಧಿಕೃತವಾಗಿ ಮಾರ್ಚ್ 31ರ ಒಳಗಾಗಿ ಪ್ಲೈಓವರ್ ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವುದಾಗಿ ಹೇಳಿದೆ. ಟೀಂ ಕುಂದಾಪುರಿಯನ್ಸ್ ಕೈಗೊಂಡ ಹೋರಾಟಕ್ಕೆ ಫಲದೊರಕಿದ್ದು, ಟೀಂ ಕುಂದಾಪುರಿಯನ್ಸ್ ತಂಡಕ್ಕೆ ಎನ್ಎಚ್ಎಐ ಅಧಿಕೃತವಾಗಿ ಪತ್ರ ಬರೆದಿದೆ.

ಕೇರಳ – ಕರ್ನಾಟಕ – ಗೋವಾ ರಾಜ್ಯವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುರತ್ಕಲ್ ನಿಂದ ಕುಂದಾಪುರದ ವರೆಗೆ ಚತುಷ್ಪತ ಕಾಮಗಾರಿ ಆರಂಭಗೊಂಡು ದಶಕವೇ ಕಳೆದುಹೋಗಿದೆ. ನವಯುಗ ಕಂಪೆನಿ ಆರಂಭದಲ್ಲಿಯೇ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿಯಲ್ಲಿ ಪ್ಲೈಓವರ್ ಕಾಮಗಾರಿಯನ್ನು ಕೈಗೆತ್ತಿಕೊಂಡಿತ್ತು.

ಆದರೆ ಬಹುತೇಕ ಕಾಮಗಾರಿ ಆರಂಭಗೊಂಡಿದ್ದರೂ ಕೂಡ ಪ್ಲೈಓವರ್ ಮಾತ್ರ ಪೂರ್ಣಗೊಂಡಿರಲಿಲ್ಲ. ಹೀಗಾಗಿ ಕುಂದಾಪುರದ ಜನತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರದ ವಿರುದ್ದ ಸಿಡಿದೆದ್ದಿದ್ದರು. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಚಳಿಬಿಡಿಸಿದ್ದರು. ಪ್ಲೈಓವರ್ ಕಾಮಗಾರಿಗಾಗಿ ನಡೆದ ಹೋರಾಟಗಳು ಒಂದಲ್ಲ, ಎರಡಲ್ಲ.

ಈ ನಡುವಲ್ಲೇ ಬೆಂಗಳೂರಿನಲ್ಲಿ ನೆಲೆಸಿರೋ ಕುಂದಾಪುರದ ಹುಡುಗರ ಟೀಂ ಕುಂದಾಪುರಿಯನ್ಸ್ ತಂಡ ಪತ್ರ ಚಳುವಳಿ ನಡೆಸೋ ಮೂಲಕ ಸ್ಥಳೀಯ ಶಾಸಕರು, ಸಚಿವರು, ಸಂಸದರು, ಮುಖ್ಯಮಂತ್ರಿಗಳು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಕೇಂದ್ರ ಸಚಿವ ನಿತಿನ್ ಗಡ್ಕರಿ, ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿವಿಧ ಜನಪ್ರತಿನಿಧಿಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ನವಯುಗ ಕಂಪೆನಿಯ ಅಧಿಕಾರಿಗಳು, ಮುಖ್ಯಸ್ಥರು ಸೇರಿದಂತೆ ಸುಮಾರು 50 ಮಂದಿ ಪತ್ರವನ್ನು ಬರೆದು ಶೀಘ್ರವಾಗಿ ಕಾಮಗಾರಿ ಮುಗಿಸುವಂತೆ ತಾಕೀತು ಮಾಡಿತ್ತು.

ಪತ್ರ ಚಳುವಳಿಯ ಬೆನ್ನಲ್ಲೇ ಕಳೆದೊಂದು ತಿಂಗಳ ಹಿಂದೆ ರಾಜ್ಯ ಸರಕಾರ ಟೀಂ ಕುಂದಾಪುರಿಯನ್ಸ್ ತಂಡಕ್ಕೆ ಪತ್ರ ಬರೆದು 4 ತಿಂಗಳ ಒಳಗಾಗಿ ಕಾಮಗಾರಿಯನ್ನು ಮುಗಿಸೋದಾಗಿ ಹೇಳಿತ್ತು. ಆ ನಂತರದಲ್ಲಿ ಪ್ಲೈಓವರ್ ಕಾಮಗಾರಿಯೂ ಚುರುಕುಗೊಂಡಿದ್ದು, ವೇಗವಾಗಿ ಕಾಮಗಾರಿ ಮುಗಿಸೋ ಲಕ್ಷಣ ಗೋಚರಿಸಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ ಟೀಂ ಕುಂದಾಪುರಿಯನ್ಸ್ ತಂಡದ ಪರವಾಗಿ ರಂಜಿತ್ ಶಿರಿಯಾರ ಅವರಿಗೆ ಪತ್ರ ಬರೆದು, ಮಾರ್ಚ್ 31ರ ಒಳಗಾಗಿ ಪ್ಲೈಓವರ್ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ. ಮಾತ್ರವಲ್ಲ ವಾಹನ ಸಂಚಾರಕ್ಕೆ ಅವಕಾಶವನ್ನು ಮಾಡಿಕೊಡುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಿನಲ್ಲಿ ಕೆಲಸಕ್ಕೆಂದು ಬೆಂಗಳೂರಿನಲ್ಲಿ ನೆಲೆಸಿರೊ ಯುವಕ ತಂಡ ಮಾಡಿರೋ ಸಾಮಾಜಿಕ ಕಾರ್ಯಕ್ಕೆ ಹುಟ್ಟೂರಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ. ಕೆಲಸದ ಬಿಡುವಿನ ವೇಳೆಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರೋ ಟೀಂ ಕುಂದಾಪುರಿಯನ್ಸ್ ಕಾರ್ಯ ನಿಜಕ್ಕೂ ಶ್ಲಾಘನೀಯ. ಮಾರ್ಚ್ 31ರ ಒಳಗೆ ಕುಂದಾಪುರ ಪ್ಲೈ ಓವರ್ ನಲ್ಲಿ ವಾಹನ ಓಡಾಡುವಂತಾದ್ರೆ ಟೀಂ ಕುಂದಾಪುರಿಯನ್ಸ್ ತಂಡದ ಸದಸ್ಯರ ಹುಟ್ಟೂರ ಜನತೆ ಖುಷಿ ಪಡೋದಂತೂ ಗ್ಯಾರಂಟಿ.