ಉತ್ತರಪ್ರದೇಶ : ಮಗುವೊಂದು ಜೀನ್ಮರಣ ಹೋರಾಟ ನಡೆಸುತ್ತಿತ್ತು. ಆದರೆ ಮಗುವಿಗೆ ಬೇಕಾದ ರಕ್ತ ದೊರಕದೆ ಪೋಷಕರು ಕಂಗಾಲಾಗಿದ್ದರು. ಆದ್ರೆ ಸಪ್ತಪದಿ ತುಳಿಯುತ್ತಿದ್ದ ದಂಪತಿ ಮದುವೆ ಮಂಟಪದಿಂದಲೇ ಆಸ್ಪತ್ರೆಗೆ ಓಡಿ ಬಂದು ಮಗುವಿನ ಜೀವ ಉಳಿಸಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಹೆಣ್ಣು ಮಗುವೊಂದನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಗುವಿಗೆ ತುರ್ತಾಗಿ ರಕ್ತದ ಅವಶ್ಯಕತೆಯಿತ್ತು. ಆದರೆ ರಕ್ತದಾನ ಮಾಡಲು ಯಾರೂ ಮುಂದೆ ಬಂದಿರಲಿಲ್ಲ. ಆದರೆ ದಂಪತಿಗಳಿಗೆ ಈ ವಿಚಾರ ತಿಳಿಯುತ್ತಿದ್ದಂತೆಯೇ ಇಬ್ಬರೂ ಆಸ್ಪತ್ರೆಗೆ ಧಾವಿಸಿ ಬಂದಿದ್ದಾರೆ. ಮದುವೆಯ ಡ್ರೆಸ್ ನಲ್ಲಿಯೇ ರಕ್ತದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಉತ್ತರ ಪ್ರದೇಶದ ಲಕ್ನೋದ ದಂಪತಿಗಳ ಕಾರ್ಯ ಇದೀಗ ಮೆಚ್ಚುಗೆಗೆ ಕಾರಣವಾಗಿದೆ. ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ಆಶಿಶ್ ಕೆಆರ್ ಮಿಶ್ರಾ ಅವರು ಈ ಕುರಿತು ಟ್ವಿಟ್ ಮಾಡಿದ್ದಾರೆ. ಪೊಲೀಸ್ ಅಧಿಕಾರಿಯೋರ್ವರು ಟ್ವಿಟ್ ಮಾಡುತ್ತಿದ್ದಂತೆಯೇ ಸಾಕಷ್ಟು ಜನರು ಟ್ವೀಟರ್ ನಲ್ಲಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.