ಶಿವಮೊಗ್ಗ: ಎಂಎಲ್ಎ ತಂದೆ ಸದನದಲ್ಲಿ ಶರ್ಟ್ ಬಿಚ್ಚಿ ಸುದ್ದಿಯಾದರೇ ಎಂಎಲ್ಎ ಪುತ್ರ ಬಿಜೆಪಿ ಮುಖಂಡನ ಮೇಲೆ ಹಲ್ಲೆ ಮಾಡಲು ಹೋಗಿ ಜೈಲು ಸೇರಿದ್ದಾನೆ. ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಶಾಸಕ ಬಿ.ಕೆ.ಸಂಗಮೇಶ್ ಪುತ್ರ ಬಸವೇಶ್ ಬಂಧಿತ ಆರೋಪಿ.

ಫೆಬ್ರವರಿ 28 ರಂದು ಭದ್ರಾವತಿಯಲ್ಲಿ ನಡೆದ ಪ್ರೋ ಕಬ್ಬಡ್ಡಿ ಮ್ಯಾಚ್ ವೇಳೆ ಸ್ಥಳೀಯ ಬಿಜೆಪಿ ಮುಖಂಡ ಮೇಲೆ ಹಲ್ಲೆ ನಡೆದಿತ್ತು.ಈ ಪ್ರಕರಣದಲ್ಲಿ ಶಾಸಕ ಬಿ.ಕೆ.ಸಂಗಮೇಶ್ ಪುತ್ರನ ಹೆಸರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಶಾಸಕರ ಪುತ್ರ ಬಸವೇಶ್ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ.

ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಬಸವೇಶ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಚಳ್ಳಕೆರೆ ಬಳಿ ಬಸವೇಶ್ ನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಎರಡು ದಿನದ ಹಿಂದೆಯಷ್ಟೇ ಸದನದಲ್ಲಿ ಬಿ.ಕೆ.ಸಂಗಮೇಶ್ ಅಭಿವೃದ್ಧಿ ವಿಚಾರವೊಂದರ ಚರ್ಚೆ ವೇಳೆ ಶರ್ಟ್ ಬಿಚ್ಚಿ ಅಸಭ್ಯ ವರ್ತನೆ ತೋರಿ ಸದನದಿಂದ ಒಂದು ವಾರದ ಮಟ್ಟಿಗೆ ಅಮಾನತ್ತುಗೊಂಡಿದ್ದಾರೆ.