ನಾಳೆ ಶಿವರಾತ್ರಿಯ ಜೊತೆಗೆ ದರ್ಶನ್ ಅಭಿಮಾನಿಗಳಿಗೆ ಹಬ್ಬದ ರಸದೌತಣ ಸಿಗಲಿದೆ. ಬರೋಬ್ಬರಿ 2 ವರ್ಷಗಳ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆರೆಗೆ ಬರಲಿದ್ದು, ಮೊದಲ ದಿನವೇ 2 ಸಾವಿರ ಶೋಗಳ ಮೂಲಕ ದಾಖಲೆ ಬರೆಯಲು ರಾಬರ್ಟ್ ಸಿದ್ಧವಾಗಿದೆ.

2019 ರಲ್ಲಿ ರಿಲೀಸ್ ಆದ ಒಡೆಯ ಸಿನಿಮಾದ ಬಳಿಕ ದಚ್ಚು ತೆರೆಗೆ ಬಂದಿಲ್ಲ.ಬಳಿಕ ರಾಬರ್ಟ್ ರಿಲೀಸ್ ಆಗಬೇಕಾಗಿತ್ತಾದರೂ ಕೊರೋನಾ ಎಫೆಕ್ಟ್ ನಿಂದ ಚಿತ್ರ ಬಿಡುಗಡೆಯಾಗಿರಲಿಲ್ಲ. ಹೀಗಾಗಿ ಯಜಮಾನನ್ನು ನೋಡೋಕೆ ಕಾದಿದ್ದ ಪ್ರೇಕ್ಷಕರಿಗೆ ನಿರಾಸೆಯಾಗಿತ್ತು.

ಇದೀಗ ಥಿಯೇಟರ್ ಗಳ ಮೇಲಿನ ನಿರ್ಭಂದ ತೆರವುಗೊಳಿಸಿದ ಮೇಲೆ ಒಂದೊಂದೇ ಬಿಗ್ ಬಜೆಟ್ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದ್ದು, ಇದರಲ್ಲಿ ದರ್ಶನ್ ಹಾಗೂ ಮರಿ ಟೈಗರ್ ಅಭಿನಯದ ರಾಬರ್ಟ್ ಮಾರ್ಚ್ 11 ರ ಶಿವರಾತ್ರಿಯಂದು ತೆಲುಗು ಹಾಗೂ ಕನ್ನಡದಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ.

ಮೊದಲ ದಿನವೇ ರಾಬರ್ಟ್ ಕರ್ನಾಟಕದ 700 ಕ್ಕೂ ಅಧಿಕ ಥಿಯೇಟರ್ ನಲ್ಲಿ ಮೂರು ಶೋದಲ್ಲಿ ತೆರೆ ಕಾಣಲಿದ್ದು, 90ಕ್ಕೂ ಹೆಚ್ಚಿ ಮಲ್ಟಿಫ್ಲೆಕ್ಸ್ ನಲ್ಲೂ ರಾಬರ್ಟ್ ರಾರಾಜಿಸಲಿದೆ. ಆ ಮೂಲಕ ಮೊದಲ ದಿನವೇ ಬರೋಬ್ಬರಿ 2 ಸಾವಿರ ಶೋ ಪ್ರದರ್ಶನಗೊಳ್ಳುವ ನೀರಿಕ್ಷೆ ಇದೆ.

ಎರಡು ರಾಜ್ಯಗಳಲ್ಲಿ ತೆಲುಗು ರಾಬರ್ಟ್ ಪ್ರದರ್ಶನ ಕಾಣಲಿದ್ದು, ಈಗಾಗಲೇ ಮಂಗ್ಲಿ ಧ್ವನಿಯಲ್ಲಿ ಮೂಡಿ ಬಂದ ಕಣ್ಣೇ ಅದಿರಿಂದಿ ಹಾಡು ಯುವಜನತೆಯನ್ನು ಸೆಳೆದಿದೆ.

ಈ ಹಿಂದೆ ಚೌಕ ಚಿತ್ರದಲ್ಲಿ ದರ್ಶನ್ ರಾಬರ್ಟ್ ಎಂಬ ಪಾತ್ರ ಮಾಡಿದ್ದರು. ಅದನ್ನೇ ಮೂಲವಾಗಿಟ್ಟುಕೊಂಡು ಕತೆ ಸಿದ್ಧಪಡಿಸಿ ರಾಬರ್ಟ್ ಸಿನಿಮಾ ಸಿದ್ಧವಾಗಿದ್ದು, ವಿನೋದ್ ಪ್ರಭಾಕರ್, ಆಶಾ ಭಟ್, ಜಗಪತಿ ಬಾಬು ಸೇರಿದಂತೆ ಅದ್ದೂರಿ ತಾರಾಗಣವಿದೆ.