ಪವಿತ್ರ ಮೆಕ್ಕಾ ಮದಿನಾ ಯಾತ್ರೆ ಮೇಲೂ ಕೊರೋನಾ ಕರಿನೆರಳು ಬಿದ್ದಿದ್ದು, ಕೊರೋನಾ ಲಸಿಕೆ ಪಡೆದವರಿಗೆ ಹಾಗೂ ಕೊರೋನಾ ದಿಂದ ಗುಣಮುಖರಾದವರಿಗೆ ಮಾತ್ರ ಮೆಕ್ಕಾ ಮದಿನಾ ಯಾತ್ರೆಗೆ ಅವಕಾಶ ಎಂದು ಸೌದಿ ಅರೇಬಿಯಾ ಸರ್ಕಾರ ಆದೇಶಿಸಿದೆ.

ಪವಿತ್ರ ರಂಜಾನ್ ತಿಂಗಳಿನಿಂದ ಆರಂಭವಾಗುವ ಮೆಕ್ಕಾ ಮತ್ತು ಮದಿನಾ ಯಾತ್ರೆಗೆ ಎರಡು ಡೋಸ್ ಕೊರೋನಾ ಲಸಿಕೆ ಪಡೆದವರು, ಅಥವಾ ಒಂದು ಲಸಿಕೆ ಪಡೆದು 14 ದಿನ ಕಳೆದವರಿಗೆ ಅವಕಾಶ ನೀಡಲಾಗುತ್ತದೆ. ಇನ್ನು ಕೊರೋನಾಕ್ಕೆ ತುತ್ತಾಗಿ ಗುಣಮುಖರಾದವರಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂದು ಪರಿಗಣಿಸಲಾಗುವುದರಿಂದ ಅವರಿಗೂ ಅವಕಾಶವಿದೆ ಎಂದು ಸೌದಿ ಸರ್ಕಾರ ಹೇಳಿದೆ.

ಮೆಕ್ಕಾ ಮದಿನಾ ಯಾತ್ರೆ ಹಾಗೂ ಅಲ್ಲಿನ ಮಸೀದಿಗಳ ಪ್ರವೇಶಕ್ಕೂ ಇದೇ ನಿಯಮ ಅನ್ವಯವಾಗಲಿದೆ. ಇದು ಕೇವಲ ಯಾತ್ರಿಕರಿಗೆ ಮಾತ್ರವಲ್ಲ ಮೌಲ್ವಿಗಳಿಗೂ ಇದೇ ನಿಯಮ ಅನ್ವಯವಾಗಲಿದೆ ಎಂದು ಉಮ್ರಾ ಸಚಿವಾಲಯ ಸ್ಪಷ್ಟಪಡಿಸಿದೆ.

ರಂಜಾನ್ ತಿಂಗಳಿನ ಆರಂಭದಿಂದ ನಡೆಯುವ ಪವಿತ್ರ ಯಾತ್ರೆಗೆ ಈ ನಿಯಮ ಅನ್ವಯವಾಗಲಿದ್ದು, ವರ್ಷದ ಕೊನೆಯಲ್ಲಿ ನಡೆಯುವ ಹಜ್ ಯಾತ್ರೆಯವರೆಗೂ ಈ ನಿಯಮ ಜಾರಿಯಲ್ಲಿರುವ ಸಾಧ್ಯತೆ ಇದೆ. ಈ ನಿಯಮದಲ್ಲಿ ಯಾವುದೇ ವಿನಾಯತಿ ಇಲ್ಲ ಎಂದು ಸಚಿವಾಲಯ ಹೇಳಿದೆ.

ಕಳೆದ ಒಂದು ವರ್ಷದಲ್ಲಿ ಸೌದಿ ಅರೇಬಿಯಾದಲ್ಲಿ ಇದುವರೆಗೂ 3, 93000 ಜನರು ಕೊರೋನಾಕ್ಕೆ ತುತ್ತಾಗಿದ್ದು, ಈ ಪೈಕಿ 3600 ಜನರು ಸಾವನ್ನಪ್ಪಿದ್ದಾರೆ. ದೇಶದಾದ್ಯಂತ 50 ಲಕ್ಷ ಜನರಿಗೆ ಕೊರೋನಾ ಲಸಿಕೆ ಈಗಾಗಲೇ ವಿತರಿಸಲಾಗಿದೆ ಎಂದು ಸ್ಥಳೀಯ ಸರ್ಕಾರ ಹೇಳಿದೆ.

ಪ್ರತಿವರ್ಷ ವಿಶ್ವದ ನಾನಾ ಭಾಗಗಗಳಿಂದ ಲಕ್ಷಾಂತರ ಜನರು ಪವಿತ್ರ ರಂಜಾನ್ ತಿಂಗಳಿನಲ್ಲಿ ಮೆಕ್ಕಾ ಹಾಗೂ ಮದಿನಾ ಯಾತ್ರೆ ಕೈಗೊಳ್ಳುವುದು ವಾಡಿಕೆ. ಆದರೆ ಲಸಿಕೆ ಕಡ್ಡಾಯವಾಗಿರೋದರಿಂದ ಜನರ ಭೇಟಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.