ಬೆಂಗಳೂರು : ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ದಿನೇ ದಿನೇ ಅತಂಕವನ್ನು ಮೂಡಿಸುತ್ತಿದೆ. ಇದೀಗ ನಿತ್ಯವೂ 6 ಸಾವಿರಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದು, ಸಕ್ರೀಯ ಪ್ರಕರಣಗಳ ಸಂಖ್ಯೆ 50 ಸಾವಿರದ ಗಡಿದಾಟಿದೆ.
ರಾಜ್ಯದಲ್ಲಿ ಗುರುವಾರ ಹೊಸದಾಗಿ 6,570 ಕರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ದಿನದ ಸೋಂಕು ಪ್ರಮಾಣ ದರ ಶೇ. 6.04ಕ್ಕೆ ಏರಿಕೆಯಾಗಿದೆ. ಅಲ್ಲದೇ ಸೋಂಕಿತರ ಸಂಖ್ಯೆ 10.40 ಲಕ್ಷಕ್ಕೆ ಏರಿಕೆಯಾಗಿದೆ.
ಸೋಂಕು ಏರಿಕೆಯೊಂದಿಗೆ ಮರಣ ಪ್ರಮಾಣವೂ ಹೆಚ್ಚುತ್ತಿದ್ದು, ಮೃತರ ಸಂಖ್ಯೆ 12,767 ತಲುಪಿದೆ. ರಾಜ್ಯದಲ್ಲಿ ಸದ್ಯ 53,395 ಸೋಂಕಿತರಿದ್ದು, ಈ ಪೈಕಿ ಗಂಭೀರ ಸಮಸ್ಯೆಯಿಂದಾಗಿ 357 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಳಿದಂತೆ ಆಸ್ಪತ್ರೆಗಳು ಹಾಗೂ ಕೋವಿಡ್ ಆರೈಕೆ ಕೇಂದ್ರಗಳು ಮತ್ತು ಲಕ್ಷಣ ರಹಿತ ಸೋಂಕಿತರು ಮನೆ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ದಿನ 2,393 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಸಂಖ್ಯೆ 9.73 ಲಕ್ಷ ದಾಟಿದೆ.