ಕೋಲಾರ: ಕೆಲದಿನಗಳ ಹಿಂದೆಯಷ್ಟೇ ಸರಳ ವಿವಾಹದ ಮೂಲಕ ಸುದ್ದಿಯಾಗಿದ್ದ ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ಚೈತ್ರಾ ಕೊಟೂರು ಮದುವೆ ಕಹಾನಿಯಲ್ಲಿ ಟ್ವಿಸ್ಟ್ ಎದುರಾಗಿದೆ. ಮದುವೆಯಲ್ಲಿ ಎದುರಾದ ವಿವಾದದಿಂದ ನೊಂದ ಚೈತ್ರಾ ಆತ್ಮಹತ್ಯೆಗೆ ಯತ್ನಿಸಿದ್ದು, ಅದಕ್ಕೂ ಮುನ್ನ ತಮ್ಮ ಬದುಕಿನ ಗಂಡ-ಹೆಂಡತಿ ಮತ್ತು ಅವಳು ಕಹಾನಿ ಬಿಚ್ಚಿಟ್ಟಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೊಟೊರು ಬೆಂಗಳೂರಿನ ದೇವಾಲಯವೊಂದರಲ್ಲಿ ಸರಳವಾಗಿ ತಾವು ಪ್ರೀತಿಸಿದ ನಾಗಾರ್ಜುನ್ ಜೊತೆ ಹೊಸ ಬದುಕಿಗೆ ಕಾಲಿರಿಸಿದ್ದರು. ಆದರೆ ಮದುವೆಯಾದ ದಿನವೇ ನಾಗಾರ್ಜುನ್ ಹೆತ್ತವರು ಇದೊಂದು ಒತ್ತಾಯದ ಮದುವೆ ಎಂದು ಆರೋಪಿಸಿದ್ದರು. ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ ಯಾವುದೇ ಅಂತ್ಯ ಕಂಡಿರಲಿಲ್ಲ.

ಪೊಲೀಸರು ಎರಡು ದಿನ ಎರಡು ಮನೆಯವರು ಚರ್ಚಿಸಿ ಬಳಿಕ ಒಂದು ನಿರ್ಧಾರಕ್ಕೆ ಬರುವಂತೆ ಸೂಚಿಸಿದ್ದರು. ಆದರೆ ಮಾತುಕತೆ ಫಲಪ್ರದವಾಗಿರಲಿಲ್ಲ. ಈ ಮಧ್ಯೆ ನಾಗಾರ್ಜುನ್ ತನ್ನ ಮನೆಯವರೊಂದಿಗೆ ತೆರಳಿದ್ದ ದುಃಖದಲ್ಲಿ ಚೈತ್ರಾ ಕೊಟೂರು ತನ್ನ ಮನೆಯಲ್ಲೇ ಪಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಇದನ್ನು ಗಮನಿಸಿದ ಪೋಷಕರು ಆಕೆಯನ್ನು ಕೋಲಾರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಈ ಆತ್ಮಹತ್ಯೆ ಪ್ರಯತ್ನಕ್ಕೂ ಮುನ್ನ ಚೈತ್ರಾ ತಮ್ಮ ಹಾಗೂ ನಾಗಾರ್ಜುನ್ ಮದುವೆ-ಪ್ರೀತಿ ಬಗ್ಗೆ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದೆ.

ಈ ವಿಡಿಯೋದಲ್ಲಿ ತಮ್ಮ ಪ್ರೀತಿ ಬಗ್ಗೆ ಮಾತನಾಡಿರುವ ಚೈತ್ರಾ, ತಮ್ಮ ನಡುವೆ ಎಲ್ಲ ರೀತಿಯ ಸಂಬಂಧವಿತ್ತು. ಆದರೆ ಎಲ್ಲರೀತಿಯಲ್ಲೂ ನನ್ನನ್ನು ಬಳಸಿಕೊಂಡ ಬಳಿಕ ನಾಗಾರ್ಜುನ್ ನನ್ನನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾನೆ. ಇದು ಎಷ್ಟು ಸರಿ. ಎಲ್ಲ ರೀತಿಯಲ್ಲಿ ಬಳಸಿಕೊಂಡು ಮದುವೆಯಾಗಲ್ಲ ಎಂದರೇ ಒಬ್ಬಳು ಹೆಣ್ಣಿನ ಕತೆ ಏನಾಗಬಹುದು? ಎಂದು ಪ್ರಶ್ನಿಸಿದ್ದಾಳೆ.

ನಾನು ಕೆಲತಿಂಗಳಿನಿಂದ ಖಿನ್ನತೆಗೆ ಒಳಗಾಗಿದ್ದೇನೆ. ಅದಕ್ಕಾಗಿ ಮಾತ್ರೆ ಸೇವಿಸುತ್ತಿದ್ದೆ. ಇದೆಲ್ಲವೂ ಅವರ ಮನೆಯವರಿಗೆ ಗೊತ್ತು. ಆದರೆ ಸಪೋರ್ಟ್ ನೀಡುವ ಬದಲು ನನ್ನ ಪ್ರೀತಿಯನ್ನು ನನ್ನಿಂದ ದೂರ ಮಾಡಲು ಯತ್ನಿಸುತ್ತಿದ್ದಾರೆ. ಇದಕ್ಕೆ ಕಾರಣ ನಾಗಾರ್ಜುನ್ ಜೊತೆ ಇರುವ ಆ ಹೆಣ್ಣುಮಗಳು.

ಆಕೆಯ ಹೆಸರು ರೇಖಾ ಅಥವಾ ಜ್ಯೋತಿ ಇರಬೇಕು. ಆಕೆಯಿಂದಲೇ ನಮ್ಮ ಬದುಕು ಹಾಳಾಯಿತು. ಆಕೆ ನಮ್ಮ ಜೀವನ ಹಾಳು ಮಾಡಿ ಅದೇನೂ ಖುಷಿ ಪಡುತ್ತಾಳೋ ಗೊತ್ತಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಆಕೆ ಮತ್ತು ನಾಗಾರ್ಜುನ್ ನಡುವೆ ಎಂತಹ ಸಂಬಂಧವಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ಚೈತ್ರಾ ಹೇಳಿದ್ದಾರೆ.

ನಾನು ಮದುವೆಗಾಗಿ ಆತನನ್ನು ಕಿಡ್ನಾಪ್ ಮಾಡಿದೆ ಎಂದು ಆರೋಪ ಮಾಡುತ್ತಾರೆ. ಆತನ ಪೋನ್ ಆತನ ಬಳಿಯೇ ಇತ್ತು.ಬಂದ ಪೋನ್ ಗಳನ್ನು ಸ್ವೀಕರಿಸುತ್ತಿದ್ದರು. ಹೀಗಾಗಿ ಇದೆಲ್ಲ ಸುಳ್ಳು ಆರೋಪ. ಆತ ಉದ್ಯಮಿ. ದುಡ್ಡಿಗಾಗಿ ನಾನು ಹೀಗೆಲ್ಲ ಮಾಡಿದ್ದೇನೆ ಎನ್ನುತ್ತಾರೆ. ಆತನೂ ಮಿಡ್ಲ್ ಕ್ಲಾಸ್ ಹುಡುಗ. ಆತನ ಬಳಿ ಹಣ ಇಲ್ಲ.ಸಾಲ ಇದೆ. ನಾನೇ ಹಲವು ಭಾರಿ ಆತನಿಗೆ ಧನಸಹಾಯ ಮಾಡಿದ್ದೆ ಎಂದು ಚೈತ್ರಾ ಸತ್ಯಗಳನ್ನು ಅನಾವರಣಗೊಳಿಸಿದ್ದಾರೆ.

ಒಟ್ಟಿನಲ್ಲಿ ಚೈತ್ರಾ ಕೊಟೊರು ಪ್ರೇಮವಿವಾಹ ಈಗ ಬೀದಿಜಗಳವಾಗಿ ಪರಿಣಮಿಸಿದ್ದು, ನಾಗಾರ್ಜುನ್ ಹೆತ್ತವರು ಚೈತ್ರಾರನ್ನು ಸೊಸೆ ಎಂದು ಸ್ವೀಕರಿಸಲು ಸಿದ್ಧರಿಲ್ಲದೇ ಮಗನನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.