ಬೆಂಗಳೂರು : ಬ್ರಾಹ್ಮಣರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಟ ಚೇತನ್ ವಿರುದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣಿಕೆ ಮತ್ತು ಬ್ರಾಹ್ಮಣತ್ವ ಭಯೋತ್ಪಾದನೆ ಎಂಬ ರೀತಿಯಲ್ಲಿ ಚೇತನ್ ಮಾತನಾಡಿದ್ದಾರೆ ಎಂದು ಆರೋಪಿಸಿ ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ನಟ ಚೇತನ್ ನೀಡಿರುವ ಹೇಳಿಕೆ ಸಮುದಾಯಕ್ಕೆ ತುಂಬಾ ನೋವನ್ನುಂಟು ಮಾಡಿದೆ. ರಾಜ್ಯದ ವಿವಿಧ ಬ್ರಾಹ್ಮಣ ಸಂಘ ಸಂಸ್ಥೆಗಳಿಂದ ನನಗೆ ಮನವಿ ಮಾಡಿರುತ್ತಾರೆ. ಈ ಹಿನ್ನೆಲೆಯಲ್ಲಿ ನಟ ಚೇತನ್ ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಬೇಕು. ಅಲ್ಲದೇ ಈ ಕುರಿತು ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.