ಬೆಂಗಳೂರಲ್ಲಿ ತಗ್ಗಿದ ಕೊರೊನಾ ಸೋಂಕು : ಹಂತ ಹಂತವಾಗಿ ಅನ್ ಲಾಕ್ ಸಾಧ್ಯತೆ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಪ್ರಮಾಣ ದಿನೇ ದಿನೇ ಇಳಿಕೆಯಾಗುತ್ತಿದೆ. ಸಿಲಿಕಾನ್ ಸಿಟಿಯನ್ನು ಹಂತ ಹಂತವಾಗಿ ಅನ್ ಲಾಕ್ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ ಸರಕಾರಕ್ಕೆ ವರದಿ ಸಲ್ಲಿಸಿದೆ, ಇನ್ನೊಂದೆಡೆ ಲಾಕ್ ಡೌನ್ ಕುರಿತು ಇನ್ನೆರಡು ದಿನಗಳಲ್ಲಿ ಭವಿಷ್ಯ ನಿರ್ಧಾರವಾಗಲಿದೆ.

ಎಪ್ರಿಲ್ 27 ರಂದು ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಲಾಕ್ ಡೌನ್ ಹೇರಿಕೆ ಮಾಡಲಾಗಿತ್ತು. ಅಲ್ಲದೇ ಕೊರೊನಾ ವೈರಸ್ ಸೋಂಕಿನ ಪಾಸಿಟಿವಿಟಿ ಪ್ರಮಾಣ ಶೇ.5ಕ್ಕೆ ಇಳಿಕೆಯಾದ್ರೆ ಲಾಕ್ ಡೌನ್ ತೆರವು ಮಾಡುವುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಇಳಿಕೆಯಾಗಿದೆ. ಇನ್ನೊಂದೆಡೆ ಸೋಂಕಿನ ಪ್ರಮಾಣವೂ ಕಡಿಮೆಯಾಗಿದೆ.

ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರೋ ಹಿನ್ನೆಲೆಯಲ್ಲಿ ಬಿಬಿಎಂಪಿ ಕೂಡ ಅನ್ ಲಾಕ್ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ವರದಿಯೊಂದನ್ನು ಸಲ್ಲಿಸಿದೆ. ವಾಣಿಜ್ಯ ಉದ್ದೇಶದಿಂದ ಹಂತ ಹಂತವಾಗಿ ಸಾರಿಗೆ, ಅಂಗಡಿ, ಮಾಲ್, ಹೋಟೆಲ್ ಆರಂಭಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿಕೊಂಡಿದೆ. ಇನ್ನೊಂದೆಡೆ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಸಭೆಯನ್ನು ನಡೆಸಲಾಗಿದೆ.

ಕೊರೊನಾ ಸೋಂಕು ಇಳಿಕೆಯಾದ್ರೂ ಕೂಡ ಏಕಾಏಕಿ ಲಾಕ್ ಡೌನ್ ತೆರವು ಮಾಡುವುದು ಬೇಡ. ಬದಲಾಗಿ ಹಂತ ಹಂತವಾಗಿ ಅನ್ ಲಾಕ್ ಪ್ರಕ್ರಿಯೆ ಆರಂಭಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನೆರಡು ದಿನಗಳಲ್ಲಿ ಸಿಎಂ ಯಡಿಯೂರಪ್ಪ ಕೊರೊನಾ ಸೋಂಕು ಹೆಚ್ಚಿರುವ ಕೆಲವು ಜಿಲ್ಲೆಗಳಿಗೆ ಭೇಟಿಯನ್ನು ನೀಡಿ ಮಾಹಿತಿಯನ್ನು ಕಲೆಹಾಕಲಿದ್ದಾರೆ. ಅಲ್ಲದೇ ತಜ್ಞರ ಜೊತೆಗೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ ಲಾಕ್ ಡೌನ್ ಮುಂದುವರಿಯುತ್ತಾ ಇಲ್ಲಾ ಅನ್ ಲಾಕ್ ಪ್ರಕ್ರಿಯೆ ಆರಂಭವಾಗುತ್ತಾ ಅನ್ನೋ ಮಾಹಿತಿಯನ್ನು ನೀಡಲಿದ್ದಾರೆ.

ಸದ್ಯದ ಮಾಹಿತಿಯ ಪ್ರಕಾರ ಬೆಂಗಳೂರಲ್ಲಿ ಹಂತ ಹಂತವಾಗಿ ಅನ್ ಲಾಕ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಆದರೆ ಲಾಕ್ ಡೌನ್ ತೆರವು ಮಾಡಿದ್ರೆ ಹಳ್ಳಿಗಳಿಂದ ಜನರು ಮತ್ತೆ ಬೆಂಗಳೂರಿನತ್ತ ಮುಖ ಮಾಡ್ತಾರೆ. ಇದರಿಂದ ಸೋಂಕು ಹರಡುವ ಸಾಧ್ಯತೆಯಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರ ಅಳೆದು ತೂಗಿ ಹಂತ ಹಂತವಾಗಿ ಅನ್ ಲಾಕ್ ಪ್ರಕ್ರಿಯೆ ಆರಂಭಿಸುವ ಸಾಧ್ಯತೆಯಿದೆ.

Comments are closed.