ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆ ಯುವ ಜನರನ್ನೇ ಹೆಚ್ಚಾಗಿ ಕಾಡಿದೆ. ಇದೀಗ ಮುಂದಿನ ಕೆಲ ತಿಂಗಳುಗಳಲ್ಲೇ ಕೊರೊನಾ ಮೂರಲೇ ಅಲೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ವೈದ್ಯರಿಗೆ ತರಬೇತಿ ನೀಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
ಕಂದಾಯ ಸಚಿವ ಆರ್.ಅಶೋಕ್ ಅವರ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದೆ. ಪ್ರಮುಖವಾಗಿ ಬೆಂಗಳೂರು ನಗರದಲ್ಲಿಯೇ ಸುಮಾರು 25 ಲಕ್ಷಕ್ಕೂ ಅಧಿಕ ಮಕ್ಕಳಿದ್ದು, ಮೂರನೇ ಅಲೆ ಮಕ್ಕಳನ್ನು ಹೆಚ್ಚಾಗಿ ಕಾಡಲಿದೆ ಅನ್ನೋ ಸುಳಿವನ್ನು ತಜ್ಞರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಖ್ಯಾತ ಮಕ್ಕಳ ತಜ್ಞರಿಂದ ವೈದ್ಯರಿಗೆ ತರಬೇತಿಯನ್ನು ನೀಡಲಾಗುತ್ತಿದೆ.
ಪ್ರಮುಖವಾಗಿ ಮಕ್ಕಳು ಕೊರೊನಾ ಸೋಂಕಿಗೆ ತುತ್ತಾದ್ರೆ ಅವರಿಗೆ ದೊಡ್ಡವರ ರೀತಿಯಲ್ಲಿ ಚಿಕಿತ್ಸೆಯನ್ನು ನೀಡಲು ಸಾಧ್ಯವಿಲ್ಲ. ಮಾತ್ರವಲ್ಲ ವಿಶೇಷವಾದ ಔಷಧವನ್ನು ಕೂಡ ನೀಡಬೇಕಾಗುತ್ತದೆ. ಅಲ್ಲದೇ 5 ವರ್ಷದೊಳಗಿನ ಮಕ್ಕಳನ್ನು ತಾಯಿಯಂತೆ ಆರೈಕೆ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ವೈದ್ಯರನ್ನು ಸಜ್ಜುಗೊಳಿಸಲಾಗುತ್ತದೆ.
ಮಕ್ಕಳು ಕೊರೊನಾ ಸೋಂಕಿಗೆ ಒಳಗಾಗಿ ಮನೆಯಲ್ಲಿಯೇ ಆರೈಕೆ ಪಡೆಯುವ ಮಕ್ಕಳಿಗಾಗಿ ಟೆಲಿ ಮೆಡಿಸಿನ್ ವಿಭಾಗವನ್ನು ಆರಂಭಿಸಲಾಗುತ್ತಿದೆ. ಮಕ್ಕಳ ಚಿಕಿತ್ಸೆಗಾಗಿಯೇ ಬೆಂಗಳೂರಲ್ಲಿ ಪ್ರಸಿದ್ದಿ ಪಡೆದಿರುವ ಸುಮಾರು 10 ಮಂದಿ ತಜ್ಞ ವೈದ್ಯರ ತಂಡವನ್ನು ಈಗಾಗಲೇ ಸಿದ್ದಪಡಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.