ಕೊರೋನಾ ಸಂಕಷ್ಟದ ನಡುವೆ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು,ವರುಣ ಆರ್ಭಟಕ್ಕೆ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ.ಬೆಂಗಳೂರು ಸೇರಿದಂತೆ ಎಲ್ಲೆಡೆಯೂ ಭರ್ಜರಿ ಮಳೆ ಸುರಿಯುತ್ತಿದೆ. ಮೋಡ ಕವಿದ ವಾತಾವರಣವೂ ಇದ್ದು, ತಕ್ಕಮಟ್ಟಿಗೆ ಚಳಿಯೂ ಮಳೆಗೆ ಸಾಥ್ ನೀಡಿದೆ.

ಕರಾವಳಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ನದಿ,ಕೊಳ್ಳ,ಕಾಲುವೆಗಳು ತುಂಬಿ ಹರಿಯುತ್ತಿದೆ. ಹಲವೆಡೆ ವಿದ್ಯುತ್ ವ್ಯತ್ಯಯ ವಾಗಿದ್ದು, ಮಳೆ ಗಾಳಿಗೆ ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ.

ಅರಬ್ಬಿ ಸಮುದ್ರದ ತಟದಲ್ಲಿರುವ ಕರಾವಳಿ ಜಿಲ್ಲೆಗಳಲ್ಲಿ ಆರೇಂಜ್ ಹಾಗೂ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆಯೂ ಸೂಚಿಸಲಾಗಿದೆ.

ಶಿವಮೊಗ್ಗ,ಹಾಸನ,ಚಿಕ್ಕಮಗಳೂರು,ಕೊಡಗಿನಲ್ಲಿ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳಲ್ಲಿ ವಾಹನ ಸಂಚಾರಕ್ಕೂ ಅಡ್ಡಿ ಉಂಟಾಗಿದೆ. ಮಹಾರಾಷ್ಟ್ರದ ಕೊಯ್ನಾದಿಂದಲೂ ನೀರು ಹರಿದುಬರುತ್ತಿದ್ದು, ಕೃಷ್ಣಾ ನದಿ ಹಾಗೂ ಹಿಪ್ಪರಗಿ ಜಲಾಶಯದಲ್ಲಿ ನೀರಿನ ಹರಿವು ಹೆಚ್ಚಿದೆ.

ನದಿಗಳಲ್ಲಿ ನೀರು ಹೆಚ್ಚಿದ್ದು, ವಿಶ್ವವಿಖ್ಯಾತ ಜೋಗಜಲಪಾತ ಮೈದುಂಬಿಕೊಂಡು ಆಕರ್ಷಕವಾಗಿದೆ. ಆದರೆ ಕೊರೋನಾದಿಂದಾಗಿ ಪ್ರವಾಸಿಗರ ಕೊರತೆ ಎದುರಾಗಿದ್ದು,ಪ್ರವಾಸೋದ್ಯಮ ಸೊರಗಿದೆ. ಮಹಾರಾಷ್ಟ್ರ ಹಾಗೂ ಬೆಳಗಾವಿಯಲ್ಲೂ ಭಾರಿ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ಹಾಗೂ ಘಟಪ್ರಭಾ ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.