ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳದ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಲಾಗುವುದು. ಅಲ್ಲದೇ ರಾಜ್ಯದಾದ್ಯಂತ ನೈಟ್ ಕರ್ಪ್ಯೂ ಅವಧಿಯನ್ನು ರಾತ್ರಿ 9 ರಿಂದಲೇ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಜ್ಞರು, ಕೋವಿಡ್ ತಾಂತ್ರಿಕ ಸಮಿತಿಯ ನೇತೃತ್ವದಲ್ಲಿ ಸಭೆಯನ್ನು ನಡೆಸಿದರು. ಸಭೆಯಲ್ಲಿ ವೀಕೆಂಡ್ ಕರ್ಪ್ಯೂ ಹೇರಿಕೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ ರಾತ್ರಿ ನೈಟ್ ಕರ್ಪ್ಯೂವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪೊಲೀಸ್ ಇಲಾಖೆಗೆ ಸೂಚನೆಯನ್ನು ನೀಡಲಾಗಿದೆ ಎಂದಿದ್ದಾರೆ.
ಕೇರಳದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ, ಮೈಸೂರು ಹಾಗೂ ಮಹಾರಾಷ್ಟ್ರದ ಗಡಿ ಜಿಲ್ಲೆಗಳಾದ ಬೆಳಗಾವಿ, ಕಲಬುರಗಿ, ವಿಜಯಪುರ, ಬೀದರ್, ಜಿಲ್ಲೆಗಳು ಸಂಪೂರ್ಣವಾಗಿ ಎರಡು ದಿನಗಳ ಕಾಲ ಬಂದ್ ಆಗಲಿವೆ. ಇಂದು ರಾತ್ರಿ 9 ಗಂಟೆಯಿಂದಲೇ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರಲಿದೆ. ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಸೇವೆಗಳು ಸಂಪೂರ್ಣವಾಗಿ ಬಂದ್ ಆಗಲಿದೆ.
ತಜ್ಞರಾದ ಡಾ.ದೇವಿ ಶೆಟ್ಟಿ, ಡಾ.ಮಂಜುನಾಥ್. ಡಾ. ರವಿ ಅವರ ನೇತೃತ್ವದಲ್ಲಿ ಸಭೆಯನ್ನು ನಡೆಸಿ ಚರ್ಚೆಯನ್ನು ಮಾಡಿ ಹಲವು ನಿರ್ಧಾರ ಕೈಗೊಳ್ಳಲಾಗಿದೆ. ಕೊರೊನಾ ಪಾಸಿಟಿವಿಟಿ ರೇಟ್ ನೋಡಿಕೊಂಡು ಮುಂದಿನ ದಿನಗಳಲ್ಲಿ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.