ತುಮಕೂರು : ಕಾರಿಗೆ ಮತ್ತೊಂದು ಕಾರು ಢಿಕ್ಕಿ ಹೊಡೆದ ಪರಿಣಾಮ 12 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿರೊ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬ್ಯಾಲದಕೆರೆ ಎಂಬಲ್ಲಿ ನಡೆದಿದೆ.

ಬೆಳಗಿನ ಜಾವ ಮೂರು ಗಂಟೆಯ ಸುಮಾರಿಗೆ ಧರ್ಮಸ್ಥಳದಿಂದ ತಮಿಳುನಾಡು ಕಡೆಗೆ ಚಲಿಸುತ್ತಿದ್ದ ಕಾರು ರಸ್ತೆಯ ಡಿವೈಡರ್ ಗೆ ಢಿಕ್ಕಿ ಹೊಡೆದಿದೆ. ಇದೇ ವೇಳೆಯಲ್ಲಿ ಬೆಂಗಳೂರು ಕಡೆಯಿಂದ ಬರುತ್ತಿದ್ದ ಇನ್ನೊಂದು ಕಾರು ಅಪಘಾತವಾದ ಕಾರಿಗೆ ಢಿಕ್ಕಿಯಾಗಿದೆ.

ಘಟನೆಯಲ್ಲಿ 12 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಟವೆರಾ ಕಾರಿನಲ್ಲಿ ಚಲಿಸುತ್ತಿದ್ದ ತಮಿಳುನಾಡು ಮೂಲದ ಮಂಜುನಾಥ್ (35), ತನುಜಾ (25), ಒಂದು ವರ್ಷದ ಹೆಣ್ಣು ಮಗು,

ಗೌರಮ್ಮ (60), ರತ್ನಮ್ಮ (52), ರಾಜೇಂದ್ರ (27), ಸುಂದರ್ ರಾಜ್ (48), ಸರಳ (32), ಪ್ರಶನ್ಯಾ(14), ಇನ್ನೊಂದು ಕಾರಿನಲ್ಲಿದ್ದ ಬೆಂಗಳೂರು ಮೂಲದ ಲಕ್ಷ್ಮೀಕಾಂತ್ (24), ಸಂದೀಪ್ (36), ಮಧು (28) ಎಂಬವರೇ ಸಾವನ್ನಪ್ಪಿದ ದುರ್ದೈವಿಗಳು.

ಘಟನೆಯಲ್ಲಿ ಗಾಯಗೊಂಡಿರುವ ಶ್ವೇತಾ, ಅರ್ಪಿತಾ, ಮಾಲಾಶ್ರೀ, ಗಂಗೋತ್ರಿ ಎಂಬವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.