ಮಂಗಳವಾರ, ಜೂನ್ 17, 2025
HomeCoastal Newsಆಟಿ ಅಮಾವಾಸ್ಯೆಯಂದು ಯಾಕೆ ಕಷಾಯ ಕುಡಿಯಬೇಕು…?

ಆಟಿ ಅಮಾವಾಸ್ಯೆಯಂದು ಯಾಕೆ ಕಷಾಯ ಕುಡಿಯಬೇಕು…?

- Advertisement -
  • ಸುಶ್ಮಿತಾ ಸುಬ್ರಹ್ಮಣ್ಯ

ತುಳುನಾಡು ತನ್ನ ಪ್ರಾಚೀನ ಆಚರಣೆಗಳು ಹಾಗೂ ವಿಶಿಷ್ಟವಾದ ಪರಂಪರೆಗೆ ಫೇಮಸ್. ಕರಾವಳಿ ಜನರ ‌ ಆಚರಣೆ ಮೌಡ್ಯವಲ್ಲ. ಇದರಲ್ಲಿ ಆರೋಗ್ಯದ ಗುಟ್ಟು ಅಡಗಿದೆ. ಶಿಸ್ತುಬದ್ಧ ಮತ್ತು ಕಠಿಣ ಪರಿಶ್ರಮದ ಜೀವನಶೈಲಿಯ ಜೊತೆಗೆ ಆಹಾರ ಕ್ರಮವು ಅವರನ್ನು ಉತ್ತಮ ಆರೋಗ್ಯದಲ್ಲಿರಿಸಿದೆ. ಈ ತುಳುನಾಡ ಸಂಸ್ಕ್ರತಿಯಲ್ಲಿ ಒಂದು ವಿಶೇಷವಾದ ಆಚರಣೆಯೇ ಆಟಿ ಅಮಾವಾಸ್ಯೆಯ ಆಚರಣೆ.

Ati Amavasye Palam Kashaya 4

ಆಟಿ ಅಮಾವಾಸೆಯ ಸಂಪ್ರದಾಯ ಯಾವಾಗ ಪ್ರಾರಂಭವಾಯಿತು ಎಂದು ಹೇಳಲು ಯಾವುದೇ ಪುರಾವೆಗಳಿಲ್ಲದಿದ್ದರೂ, ತುಳುವರು ಹಿರಿಯರು ಅನುಸರಿಸಿಕೊಂಡು ಬಂದಿರುವ ಪದ್ಧತಿಗಳನ್ನು ಸಮರ್ಪಣೆಯಿಂದ ಪಾಲಿಸುತ್ತಿದ್ದಾರೆ ಎನ್ನುವುದು ಮತ್ತೊಂದು ವಿಶೇಷ. ಈ ವರ್ಷ ಆಷಾಢ ಅಮಾವಾಸ್ಯೆ ಆಗಸ್ಟ್ 8ರಂದು ಬಂದಿದ್ದು, ಈ ದಿನ ಕಷಾಯ ಮಾಡಲು ಎಲ್ಲಾ ಸಿದ್ಧತೆ ಭರದಿಂದಲೇ ಮಾಡಿಕೊಳ್ಳುತ್ತಿದ್ದಾರೆ.

Ati Amavasye Palam Kashaya 2

ಆಷಾಢ ಮಾಸದ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಆಟಿ ಅಮಾವಾಸ್ಯೆ ಎಂದರೆ ಮೊದಲು ನೆನಪಾಗುವುದೇ, ಪಾಲೆ ಮರದ (ಹಾಳೆಮರ-ಕನ್ನಡದಲ್ಲಿ) ಕಷಾಯ. ಸಾವಿರದ ಒಂದು ಬಗೆಯ ಔಷಧೀಯ ಗುಣಗಳಿವೆ ಎಂದು ನಂಬಿರುವ ಈ ಕಷಾಯವನ್ನು ತುಳುನಾಡಿನ ಜನರು ಆಟಿ ಅಮಾವಾಸ್ಯೆಯಂದು ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯುತ್ತಾರೆ. ಇದರಿಂದ ಮುಂದಿನ ವರ್ಷದ ಆಷಾಢ ಮಾಸದವರೆಗೂ ಯಾವುದೇ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ ಎಂಬ ನಂಬಿಕೆ ಇಲ್ಲಿನ ಜನರದ್ದು.

Ati Amavasye Palam Kashaya 3

ಆಟಿ ಕಷಾಯವನ್ನು ಪಾಲೆ ಮರ (ಹಾಳೆ) ಎಂದು ಕರೆಯಲ್ಪಡುವ ಮರದ ತೊಗಟೆಯಿಂದ ತಯಾರಿಸಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಅಲ್ಸ್ಟೋನಿಯಾ ಸ್ಕಾಲರಿಸ್. ಸಾಮಾನ್ಯವಾಗಿ, ಪ್ರತಿಯೊಂದು ಗೊಂಚಲಲ್ಲೂ ಏಳು ಎಲೆಗಳನ್ನು ಹೊಂದಿರುವುದರಿಂದ ಇದನ್ನು ಸಪ್ತಪರ್ಣಿ ಮರ ಎಂದೂ ಕರೆಯುತ್ತಾರೆ. ಹಿಂದಿನ ದಿನ ಹಗ್ಗ ಕಟ್ಟಿ ರೋಗ ನಿವಾರಿಸುವ ಎಲ್ಲಾ ಗುಣಗಳನ್ನು ತೊಗಟೆಗೆ ನೀಡು ಎಂದು ಪ್ರಕೃತಿ ಮಾತೆಯನ್ನು ಬೇಡಿಕೊಳ್ಳುವ ಸಂಪ್ರದಾಯವಿದೆ. ಆಟಿ ಅಮಾವಾಸ್ಯೆಯಂದು ಸೂರ್ಯೋದಯಕ್ಕೂ ಮುನ್ನ ಕುಟುಂಬದ ಹಿರಿಯರು ಹೋಗಿ, ಆ ಮರದ ತೊಗಟೆಯನ್ನುಕಲ್ಲಿನಿಂದ ಕೆರೆದು ತರುತ್ತಾರೆ. ಈ ತೊಗಟೆಯನ್ನು ತೆಗೆಯಲು ಲೋಹವನ್ನು ಬಳಸಿದರೆ ತೊಗಟೆಯ ಔಷಧೀಯ ಗುಣಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆಯಿದ್ದು, ಕಲ್ಲಿನಿಂದಲೇ ಕೆರೆಯುತ್ತಾರೆ.

ಇದನ್ನೂ ಓದಿ :ನಿಮಗೆ ಲಟಿಕೆ ತೆಗೆಯೋ ಅಭ್ಯಾಸವಿದ್ರೆ ..? ಹಾಗಾದ್ರೆ ಇಂದೇ ಬಿಟ್ಟು ಬಿಡಿ !

ಇದನ್ನೂ ಓದಿ : Back Pain Tips : ಬೆನ್ನುನೋವಿಗೆ ಇಲ್ಲಿದೆ ಸರಳ ಪರಿಹಾರ

ಸೂರ್ಯೋದಯಕ್ಕೂ ಮೊದಲೇ ಹೋಗಿ ತಂದ ಪಾಲೆ ಮರದ ತೊಗಟೆಗೆ ಜೀರಿಗೆ, ಬೆಳ್ಳುಳ್ಳಿ, ಅರಿಶಿನ ಮತ್ತು ಒಣ ಮೆಣಸಿನಕಾಯಿಗಳನ್ನ ಮಿಶ್ರಣ ಮಾಡಿ, ಅರೆದು ರಸ ತೆಗೆಯುತ್ತಾರೆ. ಈ ಮಸಾಲೆಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದಲ್ಲದೇ, ರುಚಿಯನ್ನೂ ಹೆಚ್ಚಿಸುತ್ತದೆ. ತದನಂತರ ಮನೆಯಲ್ಲಿರುವ ಎಲ್ಲರಿಗೂ ವಯಸ್ಸಿಗೆ ಅನುಗುಣವಾಗಿ 20 ಮಿಲಿ ನಿಂದ 40 ಮಿಲೀ ರಸವನ್ನು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯಲು ನೀಡುವುದು ಪದ್ಧತಿ.

Ati Amavasye Palam Kashaya 1

ಇದರ ಜೊತೆಗೆ ಬೆಲ್ಲ, ಮಳೆಗಾಲಕ್ಕೆಂದು ಮಾಡಿಟ್ಟ ಹಲಸಿನ ಹಪ್ಪಳ, ಕೆಂಡದಲ್ಲಿ ಸುಟ್ಟ ಹಲಸಿನ ಬೀಜ ಜೊತೆಗೆ ಮೆಂತ್ಯೆ ಗಂಜಿ ಆಟಿ ಅಮಾವಾಸ್ಯೆಯ ಆಚರಣೆಗೆ ಮತ್ತಷ್ಟು ಮೆರಗು ನೀಡುವುದು. ಈ ಕಷಾಯ ತುಂಬಾ ಉಷ್ಣವಾಗಿರುವುದರಿಂದ ದೇಹವನ್ನು ತಂಪು ಮಾಡಲು ಮೆಂತ್ಯೆ ಗಂಜಿ ಸೇವಿಸುವುದು ವೈದ್ಯಕೀಯ ದೃಷ್ಠಿಕೋನವಾಗಿದೆ. ಬಹಳ ಹಿಂದಿನಿಂದ ಪಾಲಿಸಿಕೊಂಡು ಬರುತ್ತಿರುವ ಈ ಆಟಿ ಕಷಾಯ ಕುಡಿಯುವ ಪದ್ಧತಿ ಇನ್ನೂ ಇದೆಯಾದರೂ, ಹೆಚ್ಚಿನ ಕಡೆಗಳಲ್ಲಿ ಈ ಸಂಪ್ರದಾಯ ಬದಿಗೆ ಸರಿಯುತ್ತಿದೆ ಎಂಬುದು ದುರಂತ. ಇಂತಹ ವಿಶೇಷ, ಆಚರಣೆ ಸಂಪ್ರದಾಯಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular