ನವದೆಹಲಿ : ಅಪ್ಘಾನಿಸ್ತಾನ ಕೆಟ್ಟ ಪರಿಸ್ಥಿತಿಯನ್ನು ಎದುರು ನೋಡುತ್ತಿದೆ. ಇಂತಹ ಸ್ಥಿತಿಯಲ್ಲಿ ಅಪ್ಘಾನಿಸ್ತಾನ ಮುಂಬರುವ ಟಿ 20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗಿಯಾಗುತ್ತಾ, ಇಲ್ಲವೋ ಅನ್ನೋ ಚರ್ಚೆ ಶುರುವಾಗಿದೆ. ಆದ್ರೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಟಿ 20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗಿಯಾಗೋದನ್ನು ಖಚಿತ ಪಡಿಸಿದೆ.
ಟಿ 20 ವಿಶ್ವಕಪ್ನಲ್ಲಿ ಅಪ್ಘಾನಿಸ್ತಾನ್ ಭಾಗವಹಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಷ್ಟೇ ಯಾಕೆ ವಿಶ್ವಕಪ್ಗೂ ಮುನ್ನ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಒಳಗೊಂಡ ತ್ರಿಕೋನ ಸರಣಿಯೊಂದಿಗೆ ಸಿದ್ದವಾಗುತ್ತಿದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಮಾಧ್ಯಮ ವ್ಯವಸ್ಥಾಪಕ ಹಿಕ್ಮತ್ ಹಸನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಾವು ಟಿ 20 ವಿಶ್ವಕಪ್ನಲ್ಲಿ ಆಡುತ್ತೇವೆ. ಸಿದ್ಧತೆಗಳು ನಡೆಯುತ್ತಿವೆ ಮತ್ತು ಲಭ್ಯವಿರುವ ಆಟಗಾರರು ಮುಂದಿನ ದಿನಗಳಲ್ಲಿ ಕಾಬೂಲ್ನಲ್ಲಿ ತರಬೇತಿಗೆ ಮರಳಲಿದ್ದಾರೆ. ನಾವು ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಒಳಗೊಂಡ ತ್ರಿಕೋನ ಸರಣಿಗಾಗಿ ಸ್ಥಳವನ್ನು ಹಡುಕುತ್ತಿದ್ದೇವೆ. ಈಗಾಗಲೇ ಶ್ರೀಲಂಕಾದಲ್ಲಿ ಸರಣಿ ಆಯೋಜಿಸುವ ಕುರಿತು ಮಾತುಕತೆ ನಡೆಯುತ್ತಿದೆ. ಒಂದೊಮ್ಮೆ ಶ್ರೀಲಂಕಾದಲ್ಲಿ ಸಾಧ್ಯವಾಗದಿದ್ರೆ ದುಬೈನಲ್ಲಿ ಪಂದ್ಯಾವಳಿ ನಡೆಯೋದು ಬಹುತೇಕ ಖಚಿತ ಎಂದಿದ್ದಾರೆ.
ವಿಶ್ವಕಪ್ಗೆ ಮುಂಚಿತವಾಗಿ ಆಟಗಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿಬಲ್ಲಿ ನಾವು ದೇಶೀಯ ಟಿ 20 ಟೂರ್ನಮೆಂಟ್ನೊಂದಿಗೆ ಮುಂದುವರಿಯಲು ಯೋಜಿಸುತ್ತಿದ್ದೇವೆ. ಆಟಗಾರರ ಕುಟುಂಬಗಳಿಗೆ ಸಹಾಯ ಮಾಡಲು ಮಂಡಳಿ ಸದಾ ಸಿದ್ದವಿದೆ ಎಂದು ಹೇಳಿದ್ದಾರೆ. ಈ ಮೂಲಕ ಅಪ್ಘಾನಿಸ್ತಾನ್ ಕ್ರಿಕೆಟ್ ತಂಡ ವಿಶ್ವಕಪ್ಗೆ ಸಿದ್ದವಾಗೋದು ಖಚಿತವಾಗಿದೆ.