ಕಾಪು : ಕಾರು – ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಪೈಂಟಿಂಗ್ ಕಂಟ್ರಾಕ್ಟರ್ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಮೂಡಬೆಟ್ಟುವಿನಲ್ಲಿ ನಡೆದಿದೆ.

ಉದ್ಯಾವರ ಕಟ್ಟೆಗುಡ್ಡೆಯ ನಿವಾಸಿ ಸುಧಾಕರ್ (45 ವರ್ಷ) ಎಂಬವರೇ ಮೃತ ದುರ್ದೈವಿ. ಪೈಂಟಿಂಗ್ ಗುತ್ತಿಗೆದಾರರಾಗಿ ಕೆಲಸ ಮಾಡ್ತಿದ್ದ ಸುಧಾಕರ್ ಅವರು ಬೆಳಗ್ಗೆ 9.45ರ ಸಮಯದಲ್ಲಿ ತನ್ನ ಬೈಕಿನಲ್ಲಿ ಕಾಪುವಿಗೆ ಹೊರಟಿದ್ದರು. ಇದೇ ವೇಳೆಯಲ್ಲಿ ಕಾಪುವಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಮಾರುತಿ ಎರ್ಟಿಗಾ ಕಾರು ಚಾಲಕ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಗೆ ಢಿಕ್ಕಿ ಹೊಡೆದಿದೆ.

ನಂತರ ಇನ್ನೊಂದು ಬದಿಯ ರಸ್ತೆಗೆ ಹಾರಿ ಸುಧಾಕರ್ ಅವರ ಬೈಕಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸುಧಾಕರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರು ಚಾಲಕನ ಅತೀ ವೇಗವೇ ಅಪಘಾತಕ್ಕೆ ಕಾರಣವೆನ್ನಲಾಗುತ್ತಿದೆ. ಸ್ಥಳಕ್ಕೆ ಕಾಪು ಠಾಣಾಧಿಕಾರಿ ರಾಜಶೇಖರ್ ಬಿ. ಸಾಗನೂರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.