ಪೂಂಜಾಲಕಟ್ಟೆಯಲ್ಲಿ ವಿಶಿಷ್ಟ ಸಾಮೂಹಿಕ ವಿವಾಹ : ಮಾದರಿ ಕೆಲಸಕ್ಕೆ ಮುನ್ನುಡಿ ಬರೆದ ಸ್ವಸ್ತಿಕ್ ಫ್ರೆಂಡ್ಸ್

0

ಪೂಂಜಾಲಕಟ್ಟೆ : ಬಡತನದಲ್ಲಿ ಬೆಂದವರಿಗೆ ಮಗಳನ್ನು ಮದುವೆ ಮಾಡೋದು ಅಂದ್ರೆ ಸುಲಭ ಕೆಲಸವಲ್ಲ. ಮದುವೆ ಮಾಡೋದಕ್ಕೆ ಎಷ್ಟೋ ಕಟುಂಬಗಳು ಕಣ್ಣೀರು ಹಾಕ್ತಿವೆ. ಇಂತಹ ಕುಟುಂಬಗಳ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ಕಲ್ಪಿಸೋ ಸಲುವಾಗಿ ಪೂಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಸರಳ ಸಾಮೂಹಿಕ ವಿವಾಹ ಆಯೋಜನೆಯ ಮೂಲಕ ಮಾದರಿಯಾಗಿದೆ.

12ನೇ ವರ್ಷದ ಸರಳ ಸಾಮೂಹಿಕ ವಿವಾಹ ಮಹೋತ್ಸವವು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ, ಬುದ್ದ ಭಾರತ ರತ್ನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಎಂ.ತುಂಗಪ್ಪ ಬೇಂಗೇರರ ನೇತೃತ್ವದದಲ್ಲಿ ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ ಮುಂಬೈ ಅವರ ಸಾರಥ್ಯದಲ್ಲಿ ಅದ್ದೂರಿಯಾಗಿ ನಡೆಯಿತು.

ವಿವಾಹ ಕಾರ್ಯಕ್ರಮಕ್ಕೆ ಮುನ್ನ ಬಸವನಗುಡಿಯ ಶ್ರೀಬಸವೇಶ್ವರ ದೇವಸ್ಥಾನದ ವಠಾರದಿಂದ ನೂತನ ವಧು-ವರರನ್ನು ಜಾನಪದ ಕಲಾತಂಡಗಳ ಪ್ರದರ್ಶನದ ಮೂಲಕ ವೈಭವದ ದಿಬ್ಬಣ ಮೆರವಣಿಗೆಯಲ್ಲಿ ವಿವಾಹ ಮಂಟಪಕ್ಕೆ ಕರೆತರಲಾಯಿತು.

ಪುಂಜಾಲಕಟ್ಟೆ ಠಾಣೆಯ ಎಸ್ ಐ.ಸೌಮ್ಯ ಅವರು ಮೆರವಣಿಗೆಯನ್ನು ಉದ್ಘಾಟಿಸಿದರು.

ಸಾಮೂಹಿಕ ವಿವಾಹದ ಸಾರಥಿ ಎಂ.ತುಂಗಪ್ಪ ಬಂಗೇರ

11.30 ರ ಶುಭಮುಹೂರ್ತದಲ್ಲಿ ಪುಂಜಾಲಕಟ್ಟೆ ಶ್ರೀಗೋಪಾಲಕೃಷ್ಣ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕರಾದ ವೇ.ಮೂ.ಶ್ರೀಕೃಷ್ಣ ಭಟ್ ಗುರುವಾಯನಕೆರೆ ಮತ್ತು ಅರ್ಚಕ ತಂಡ ನೂತನ ವಧುವರರಿಗೆ ಗೃಹಸ್ಥಾಶ್ರಮದ ದೀಕ್ಷೇಯನ್ನು ನೀಡಿದರು.

ಪೂಂಜಾಲಕಟ್ಟೆಯ ಬಂಗ್ಲೆ ಮೈದಾನದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ 10 ಜೋಡಿ ನವದಂಪತಿಗಳು ಹಸೆಮಣೆ ಏರಿದ್ದಾರೆ.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ವಿವಾಹ ಸಮಾರಂಭವನ್ನು ಉದ್ಘಾಟಿಸಿ ನೂತನ ವಧು, ವರರಿಗೆ ಶುಭಹಾರೈಸಿದರು. ನಂತರ ಮಾತನಾಡಿದ ಅವರು, ಸಾಮೂಹಿಕ ವಿವಾಹದಂತ ಈ ಪುಣ್ಯ ಕಾರ್ಯಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ , ಸಪ್ತಪದಿಯಡಿ ಸರಕಾರವು ಸಾಮೂಹಿಕ ವಿವಾಹದ ಸಂಕಲ್ಪವನ್ನು ಮಾಡಿದೆ. ಈ ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಎಲ್ಲರೂ ಸಹಕಾರಿಸುವಂತೆ ಕೋರಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಅವರು ಮಾತನಾಡಿ, ನಮ್ಮ ಸಂಸ್ಕಾರ ಭಾಷಣಕ್ಕೆ ಸೀಮಿತವಾಗದೇ ಅನುಕರಣೆಗೆ ಬರಬೇಕು, ತುಳು ಸಾಹಿತ್ಯ ಅಕಾಡೆಮಿಯಿಂದ ತುಳು ಸಂಘಟನೆ, ಯುವ ಬಾಲಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಲು ಯೋಚಿಸಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಲಬ್ ನ ಸ್ಥಾಪಕಾಧ್ಯಕ್ಷ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಅವರು ಮಾತನಾಡಿ, ಕಳೆದ 12 ವರ್ಷಗಳ ಅವಧಿಯಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ವತಿಯಿಂದ ನಡೆಸಿದ ಸರಳ ಸಾಮೂಹಿಕ ವಿವಾಹದಲ್ಲಿ ಒಟ್ಟು 486 ಮಂದಿ ಹಸೆಮಣೆ ಏರಿದ್ದಾರೆ. ಸಾಮೂಹಿಕ ವಿವಾಹಕ್ಕೆ ಒತ್ತು ನೀಡುವ ಕೆಲಸ ಸರಕಾರದಿಂದಲೂ ನಡೆಯಬೇಕು ಎಂದರು.

ಸರಳ ಸಾಮೂಹಿಕ ವಿವಾಹದ ಜೊತೆಗೆ ಸಾಧಕರಿಗೆ ಸ್ವಸ್ತಿ ಸಿರಿ ಪ್ರಶಸ್ತಿ ಮತ್ತು ಸ್ವಸ್ತಿಕ ಸಂಭ್ರಮ ಪುರಸ್ಕಾರ ನೀಡಿ ಗೌರವಿಸಲಾಯಿತು. ಉದ್ಯಮ ಕ್ಷೇತ್ರದ ಸಾಧನೆಗಾಗಿ ಬೆಂಗಳೂರಿನ ಬೊಮ್ಮಸಂದ್ರ ಶಶಿಕಿರಣ್, ಕಂಬಳ ಕ್ಷೇತ್ರದ ಸಾಧನೆಗಾಗಿ ಬೊಳಗುತ್ತು ಸತೀಶ್ ಶೆಟ್ಟಿ ಮತ್ತು ಜಗದೀಶ್ ಶೆಟ್ಟಿ , ಸಮಾಜಿಕ ಸೇವೆಗಾಗಿ ಬೆಂಗಳೂರಿನ ಕೆ.ಸುಂದರ ಸಾಲ್ಯಾನ್ ಜಾಗೂ ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಾಗಿ ಮೋಹನದಾಸ್ ಕೊಟ್ಟಾರಿ ಅವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿಯನ್ನು ಪ್ರಧಾನಿಸಲಾಯಿತು.

ಮಾತ್ರವಲ್ಲ ಉದ್ಯಮ ಕ್ಷೇತ್ರದ ಸಾಧನೆಗಾಗಿ ಲಿಯೋ ಬಾಸಿಲ್ ಫರ್ನಾಂಡಿಸ್, ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಾಗಿ ಬ್ರಾಹ್ಮಿ ಮಯ್ಯ, ಕಲಾ ಕ್ಷೇತ್ರದ ಸಾಧನೆಗಾಗಿ ಆರಾಧನಾ ಭಟ್ ನಿಡ್ಡೋಡಿ ಹಾಗೂ ಅತ್ಯುತ್ತಮ ಯುವ ಸಂಘಟನೆಗಾಗಿ ಸ್ವರ್ಣ ಸಂಜೀವಿನಿ ಮಡವು ಪಾಂಡವರಕಲ್ಲು ಅವರಿಗೆ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ನೀಡಿ ಗೌರವಿಸಲಾಯಿತು.

ಅತಿಥಿಯಾಗಿದ್ದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಉದ್ಯಮಿ ಹರೀಂದ್ರ ಪೈ, ಬಂಟ್ವಾಳ ಎಆರ್ ಟಿಒ ಚರಣ್.ಕೆ., ವಾಮದಪದವು ಪ್ರ.ದ.ಕಾಲೇಜಿನ ಪ್ರಾಂಶುಪಾಲ ಹರಿಪ್ರಸಾದ್ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಮಲ್ಲಿಕಾ ಶೆಟ್ಟಿ, ಪಿಲಾತಬೆಟ್ಟು ಸೇ.ಸ.ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ ಶುಭಹಾರೈಸಿದರು.

ಪಿಲಾತಬೆಟ್ಟು ಗ್ರಾಪಂ ಚಂದ್ರಶೇಖರ ಶೆಟ್ಟಿ ಶ್ರೀ.ಕ್ಷೇ.ಧ.ಗ್ರಾ.ಯೋ.ಯ ಬಂಟ್ವಾಳ ಘಟಕದ ಯೋಜನಾಕಾರಿ ಪಿ.ಜಯರಾಮ್, ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಸ್ವರ್ಣೋದ್ಯಮಿ ಲೋಕೇಶ್ ಆಚಾರ್ಯ, ಕಂಬಳದ ತೀರ್ಪುಗಾರ ರಾಜೀವ ಶೆಟ್ಟಿ ಎಡ್ತೂರು ಅವರು ಕ್ಲಬ್ ನ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಪದಾಕಾರಿಗಳಾದ ರಾಜೇಶ್ ಪಿ.ಪುಂಜಾಲಕಟ್ಟೆ, ಅಬ್ದುಲ್ಲಾ.ಪಿ.,ಜಯರಾಜ್ ಅತ್ತಾಜೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ನ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಸ್ವಾಗತಿಸಿದರು. ನಿವೃತ್ತ ಅಧ್ಯಾಪಕ ರಾಮಚಂದ್ರ ರಾವ್,ಸಮೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

ಸಾಮಾಜಿಕ ಕಾರ್ಯಗಳ ಮೂಲಕ ಈಗಾಗಲೇ ಜನ ಮೆಚ್ಚುಗೆಯನ್ನು ಪಡೆದುಕೊಂಡಿರೊ ಸ್ವಸ್ತಿಕ್ ಫ್ರೆಂಡ್ ನಡೆಸುತ್ತಿರೋ ಸರಳ ಸಾಮೂಹಿಕ ವಿವಾಹ ಜನಮೆಚ್ಚುಗೆಯನ್ನು ಪಡೆದುಕೊಂಡಿದೆ. ಗ್ರಹಸ್ಥಾಶ್ರಮಕ್ಕೆ ಕಾಲಿರಿಸಿದ ವಧೂವರರಿಗೆ ಕರ್ನಾಟಕ ಸರಕಾರದ ಆದರ್ಶ ವಿವಾಹ ಯೋಜನೆಯಡಿಯಲ್ಲಿ 50,000 ರೂಪಾಯಿ ಹಣವನ್ನು ವಧುವಿನ ಖಾತೆಗೆ ಜಮೆ ಮಾಡಲಾಗುತ್ತದೆ.

Leave A Reply

Your email address will not be published.