ಮಂಡ್ಯ : ಪತ್ರಕರ್ತರಿಗೆ ಕೋವಿಡ್-19 ಪರೀಕ್ಷೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ದಾಂಧಲೆ ಎಬ್ಬಿಸಿದ ಆರೋಪದ ಮೇಲೆ ಜೆಡಿಎಸ್ ನಾಯಕ ಶ್ರೀಕಂಠೇ ಗೌಡ,ಅವರ ಪುತ್ರ ಮತ್ತು ಇತರ ಮೂವರ ವಿರುದ್ಧ ಮಂಡ್ಯದ ಪಶ್ಚಿಮ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ರಾಜ್ಯ ಎಲ್ಲಾ ಪತ್ರಕರ್ತರಿಗೂ ಟೆಸ್ಟ್ ನಡೆಸುವಂತೆ ರಾಜ್ಯ ಸರ್ಕಾರದಿಂದ ಆದೇಶ ನೀಡಿತ್ತು ಈ ಹಿನ್ನೆಲೆ ಇವತ್ತು ಮಂಡ್ಯದಲ್ಲಿ ಟೆಸ್ಟ್ ವೇಳೆ ಜೆಡಿಎಸ್ ಎಂಎಲ್‌ಸಿ ಶ್ರೀಕಂಠೇಗೌಡ ಕಿರಿಕ್ ಮಾಡಿದ್ದಾರೆ.

ಮಂಡ್ಯ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಮಂಡ್ಯದ ಪತ್ರಕರ್ತರಿಗೆ ಕೊರೊನಾ ಟೆಸ್ಟ್‌ಗೆ ಆಯೋಜನೆ ಮಾಡಲಾಗಿದೆ.

ಆದರೆ ಅಂಬೇಡ್ಕರ್ ಭವನದ ಬಳಿ ಎಂಎಲ್‌ಸಿ ಶ್ರೀಕಂಠೇಗೌಡ ನಿವಾಸ ಇದ್ದು, ಇಲ್ಲಿ ಟೆಸ್ಟ್ ಮಾಡಬೇಡಿ ಎಂದು ಸ್ಥಳೀಯರೊಂದಿಗೆ ಖ್ಯಾತೆ ತೆಗೆದಿದ್ದಾರೆ. ಅಲ್ಲದೇ ಕೋವಿಡ್ ಟೆಸ್ಟ್ ನಿಲ್ಲಿಸುವಂತೆ ಅವಾಜ್ ಹಾಕಿದ್ದಾರೆ.

ಮಾತ್ರವಲ್ಲ ಶಿಬಿರ ನಡೆಸೋದಕ್ಕೆ ಮುಂದಾಗುತ್ತಲೇ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಪುತ್ರ ಹಲ್ಲೆಗೆ ಮುಂದಾಗಿದ್ದು, ದಾಂಧಲೆ ನಡೆಸಿದ್ದಾರೆ. ಇದರಿಂದಾಗಿ ಶಿಬಿರ ನಡೆಸೋದಕ್ಕೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪತ್ರಕರ್ತರು ನೀಡಿದ ಲಿಖಿತ ದೂರನ್ನು ಆಧರಿಸಿ ಮಂಡ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿನ್ನೆ 15 ಪತ್ರಕರ್ತರಿಗೆ ಕೊರೊನಾ ತಪಾಸಣೆ ನಡೆಸಲಾಗಿದ್ದು, ಇಂದು 27 ಮಂದಿ ಪತ್ರಕರ್ತರಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತಿತ್ತು ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.