ಮಂಗಳೂರು : ಲಾಕ್ ಡೌನ್ ಹಿನ್ನೆಲೆಯಲ್ಲಿ ಜನ ಕೆಲಸವಿಲ್ಲದೇ ಮನೆಯೊಳಗೆ ಬಂಧಿಯಾಗಿದ್ದಾರೆ. ಹೀಗಾಗಿಯೇ ಕೇಂದ್ರ ಸರಕಾರ ಜನರ ಜನಧನ್ ಖಾತೆಗಳಿಗೆ ಪ್ರತೀ ತಿಂಗಳು 500 ರೂಪಾಯಿಯಂತೆ ಮೂರು ತಿಂಗಳ ಕಾಲ 1,500 ರೂಪಾಯಿ ನೀಡುತ್ತಿದೆ. ಆದರೆ ಖದೀಮರ ಕಣ್ಣು ಇದೀಗ ಬಡ ಜನರ ಜನಧನ್ ಖಾತೆಯ ಮೇಲೆ ಬಿದ್ದಿದೆ. ಜನಧನ್ ಖಾತೆಗೆ ಹಣ ಹಾಕ್ತೇವೆ ಅಂತಾ ಹೇಳುವ ಅಪರಿಚಿತರ ಮಾತನ್ನು ನಂಬಿದ್ರೆ ಖಾತೆಯಲ್ಲಿರೊ ಹಣ ಮಂಗವಾಯವಾಗೋದು ಗ್ಯಾರಂಟಿ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಲೇ ದೇಶದ ಪ್ರತಿಯೊಬ್ಬ ನಾಗರೀಕ ಕೂಡ ಬ್ಯಾಂಕ್ ಖಾತೆಯನ್ನು ಹೊಂದಿರಬೇಕೆನ್ನುವ ನಿಟ್ಟಿನಲ್ಲಿ ಜನಧನ್ ಖಾತೆಯನ್ನು ತೆರೆಯೋದಕ್ಕೆ ಅವಕಾಶವನ್ನು ಕಲ್ಪಿಸಿದ್ದರು. ಹೀಗಾಗಿ ಕೋಟ್ಯಾಂತರ ಮಂದಿ ಜನಧನ್ ಖಾತೆ ತೆರೆದಿದ್ದಾರೆ. ಇದೀಗ ಲಾಕ್ ಡೌನ್ ನಿಂದ ತತ್ತರಿಸಿದ್ದ ಮಹಿಳೆಯರ ಜನಧನ್ ಖಾತೆಗಳಿಗೆ ಪ್ರತೀ ತಿಂಗಳು 500 ರೂಪಾಯಿಯಂತೆ 1,500 ರೂಪಾಯಿ ಜಮೆ ಮಾಡುವುದಾಗಿ ಘೋಷಣೆ ಮಾಡಿದ್ದರು.

ಅದರಂತೆಯೇ ಹಣವನ್ನು ಜಮೆ ಮಾಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಖದೀಮರು, ಬಡ ಮಹಿಳೆಯರಿಗೆ (8910219497) ಸಂಖ್ಯೆಯಿಂದ ಕರೆ ಮಾಡಿ ಆರ್ ಆರ್ (OTP) ನಂಬರ್ ಕೊಡುವಂತೆ ಕೇಳುತ್ತಿದ್ದಾರೆ. (OTP ಅಂದ್ರೆ ಯಾರೂ ಕೊಡುವುದಿಲ್ಲಾ ಅನ್ನೋ ಕಾರಣಕ್ಕೆ ಆರ್ ಆರ್ ನಂಬರ್ ಅಂತಾ ಹೇಳುತ್ತಿದ್ದಾರೆ.) ನೀವು ಆರ್ ಆರ್ ನಂಬರ್ ನೀಡಿದ್ರೆ ನಿಮ್ಮ ಖಾತೆಗೆ 1,500 ರೂಪಾಯಿ ನೀಡುತ್ತೇವೆ ಅಂತಿದ್ದಾರೆ.

ಕೇವಲ ಜನಧನ್ ಖಾತೆಯನ್ನು ಹೊಂದಿರುವವರಿಗೆ ಮಾತ್ರವಲ್ಲ, ಜನಧನ್ ಖಾತೆಯನ್ನು ಹೊಂದಿಲ್ಲದವರಿಗೂ ಕರೆ ಮಾಡಿದ್ದಾರೆ. ಕೇಂದ್ರ ಸರಕಾರದ ವತಿಯಿಂದ ನಿಮ್ಮ ಖಾತೆಗೆ ಹಣ ಜಮೆ ಮಾಡುವುದಾಗಿ ಹೇಳುತ್ತಿದ್ದಾರೆ. ಒಂದೊಮ್ಮೆ ಖದೀಮರ ಮಾತಿಗೆ ಮರಳಾಗಿ ಖಾತೆಯ ಮಾಹಿತಿಯನ್ನು ನೀಡಿದ್ರೆ ನಿಮ್ಮ ಖಾತೆಯಲ್ಲಿರುವ ಹಣ ಮಾಯವಾಗೋದು ಗ್ಯಾರಂಟಿ. ಈ ಕುರಿತು ಪೊಲೀಸ್ ಇಲಾಖೆ ಕೂಡ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವ ಅಗತ್ಯವಿದೆ. ಮೊದಲೇ ಲಾಕ್ ಡೌನ್ ನಿಂದ ತತ್ತರಿಸಿರೋ ಜನರಿಗೆ ಇಂತಹ ಖದೀಮರಿಂದ ಮುಕ್ತಿದೊರಕಿಸಬೇಕಿದೆ.