puneeth rajkumar :ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಅಗಲಿ ಒಂದು ವರ್ಷ ಕಳೆಯಲು ಇನ್ನೇನು ಒಂದು ದಿನ ಬಾಕಿ ಇದೆ. ಆದರೆ ಅಪ್ಪು ತಮ್ಮ ಸಿನಿಮಾದ ಮೂಲಕ ಮತ್ತೆ ಮತ್ತೆ ಅಭಿಮಾನಿಗಳ ಎದುರು ಬರ್ತಾನೇ ಇದ್ದಾರೆ. ಜೇಮ್ಸ್ ಸಿನಿಮಾವೇ ಅಪ್ಪುವಿನ ಕೊನೆ ಸಿನಿಮಾ ಅಂತಾ ಹೇಳಲಾಗಿತ್ತು.ಆದರೆ ಅಪ್ಪು ಲಕ್ಕಿಮ್ಯಾನ್ ಸಿನಿಮಾದ ಮೂಲಕ ಮತ್ತೆ ಅಭಿಮಾನಿ ದೇವರುಗಳ ಎದುರು ಪ್ರತ್ಯಕ್ಷರಾಗಿದ್ರು. ಇದೀಗ ಗಂಧದಗುಡಿ ಡಾಕ್ಯೂಮೆಂಟರಿ ಮೂಲಕ ಮತ್ತೊಮ್ಮೆ ಅಪ್ಪು ಕನ್ನಡಿಗರ ಎದುರು ನಿಂತಿದ್ದಾರೆ. ತಾವು ಸಾಕಷ್ಟು ನಿರೀಕ್ಷೆ ಹಾಗೂ ಕನಸುಗಳನ್ನು ಇಟ್ಟುಕೊಂಡಿದ್ದ ಗಂಧದಗುಡಿ ಪ್ರಾಜೆಕ್ಟ್ ಇದೀಗ ಬೆಳ್ಳಿ ಪರದೆಯ ಮೇಲೆ ರಾರಾಜಿಸುತ್ತಿದೆ.
ಪುನೀತ್ ರಾಜ್ಕುಮಾರ್ ತಾವು ನಿಧನರಾಗುವ ಎರಡು ದಿನಗಳ ಹಿಂದೆ ಗಂಧದಗುಡಿ ಪ್ರಾಜೆಕ್ಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಆದರೆ ಈ ಪೋಸ್ಟ್ ಶೇರ್ ಮಾಡಿದ್ದ ಕೇವಲ ಎರಡೇ ದಿನಕ್ಕೆ ಅವರು ನಿಧನರಾಗಿದ್ದರು. ವಿಪರ್ಯಾಸ ಅಂದರೆ ಒಂದು ವರ್ಷದ ಬಳಿಕ ಅದೇ ದಿನದಂದು ಪುನೀತ್ ರಾಜ್ಕುಮಾರ್ ಸೋಶಿಯಲ್ ಮೀಡಿಯಾ ಖಾತೆಗಳಿಂದ ಗಂಧದಗುಡಿ ಸಿನಿಮಾ ಸಂಬಂಧಿ ಪೋಸ್ಟ್ಗಳು ಶೇರ್ ಆಗಿವೆ. ಒಂದು ಗಂಟೆ ಮೂವತ್ತೇಳು ನಿಮಿಷ ಅವಧಿಯ ಈ ಗಂಧದ ಗುಡಿ ಅಭಿಮಾನಿಗಳ ಮನಗೆಲ್ಲುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.
ಡಾ.ರಾಜ್ಕುಮಾರ್ ಅಭಿನಯದ ಗಂಧದಗುಡಿ ಸಿನಿಮಾ ಈಗಲೂ ಕೂಡ ಚಂದನವನದ ದಂತಕತೆಗಳ ಸಾಲಿನಲ್ಲಿ ಸೇರಿದೆ. ಇದಾದ ಬಳಿಕ ಶಿವರಾಜ್ಕುಮಾರ್ ಗಂಧದ ಗುಡಿ 2 ಸಿನಿಮಾವನ್ನು ಮಾಡಿ ಅಭಿಮಾನಿಗಳು ಕಾಡಿನ ರಕ್ಷಣೆಯ ಸಂದೇಶ ಸಾರಿದ್ದರು. ಇದೀಗ ಪುನೀತ್ ರಾಜ್ಕುಮಾರ್ ಕೂಡ ಗಂಧದಗುಡಿಯ ಭಾಗವಾಗಿದ್ದಾರೆ. ಆದರೆ ಇವರು ಯಾವುದೇ ಕಾಲ್ಪನಿಕ ಕತೆಯ ಮೂಲಕ ಅರಣ್ಯ ರಕ್ಷಣೆಯ ಸಂದೇಶ ಸಾರಿಲ್ಲ. ಬದಲಾಗಿ ತಾವೇ ಕಾಡಿನಲ್ಲಿದ್ದು ಪ್ರಕೃತಿಯೊಂದಿಗೆ ಬೆರೆತು ಒಂದೊಳ್ಳೆ ಜರ್ನಿಯನ್ನು ಮಾಡಿದ್ದಾರೆ.
ನಾಗರಹೊಳೆಯಿಂದ ಆರಂಭವಾಗುವ ಪುನೀತ್ರಾಜ್ಕುಮಾರ್ ಪಯಣ ಡಾ.ರಾಜ್ಕುಮಾರ್ ಜನಿಸಿದ ಗಾಜನೂರಿಗೆ ತಲುಪುತ್ತೆ.ಇದಾದ ಬಳಿಕ ಬಿಆರ್ಟಿ ಟೈಗರ್ ರಿಸರ್ವ್, ವಿಜಯನಗರ, ದಾಂಡೇಲಿ ಹೀಗೆ ಮಲೆನಾಡು, ಬೆಟ್ಟ- ಗುಡ್ಡ, ಆನೆ ಕ್ಯಾಂಪ್ಗಳು, ಕಾಳಿ ಹಾಗೂ ತುಂಗಭದ್ರಾ ನದಿ , ಕರಾವಳಿ ತೀರ, ಹೀಗೆ ಎಲ್ಲಾ ಕಡೆ ಸುತ್ತಿದ್ದಾರೆ. ಕುರಿಗಾಹಿಗಳ ಜೊತೆ ಕುಳಿತು ಊಟ ಮಾಡುವ ಅಪ್ಪು ದೊಡ್ಡ ನಟನಂತೆ ಕಾಣೋದೇ ಇಲ್ಲ. ಬದಲಾಗಿ ಒಬ್ಬ ಪುಟ್ಟ ಮಗುವಿನಂತೆ ಎನಿಸುತ್ತಾರೆ. ಅಷ್ಟರ ಮಟ್ಟಿಗೆ ಪುನೀತ್ ಕರುನಾಡಿನ ಪ್ರತಿಯೊಬ್ಬ ಕನ್ನಡಿಗನ ಮನಸಲ್ಲಿ ರಾರಾಜಿಸುತ್ತಾರೆ.
ವಿಶೇಷ ಅಂದರೆ ಈ ಡಾಕ್ಯೂಮೆಂಟರಿಯಲ್ಲಿ ಅಶ್ವಿನಿ ಪುನೀತ್ರಾಜ್ಕುಮಾರ್ ಕೂಡ ಇದ್ದಾರೆ. ಗಂಧದ ಗುಡಿ ನೋಡುವ ಆ ಒಂದೂವರೆ ಗಂಟೆಯಲ್ಲಿ ಅಪ್ಪು ಈಗ ನಮ್ಮೊಂದಿಗಿಲ್ಲ ಎಂಬ ವಾಸ್ತವವೊಂದು ಸಂಪೂರ್ಣ ಮರೆತೇ ಹೋಗುತ್ತೆ. ಪುನೀತ್ ಇನ್ನೂ ನಮ್ಮೊಂದಿಗೆ ಇದ್ದಾರೆ ಎಂಬ ಭಾವದಲ್ಲಿಯೇ ಪ್ರೇಕ್ಷಕ ಇದನ್ನು ನೋಡುತ್ತಾನೆ. ನಿರ್ದೇಶಕ ಅಮೋಘವರ್ಷ ಕೂಡ ಪುನೀತ್ ಅಭಿಮಾನಿಗಳಿಗೆ ಒಂದಿಂಚೂ ಬೇಸರವೆನಿಸದಂತೆ ಈ ಅದ್ಭುತ ಅನುಭವವನ್ನು ಕಟ್ಟಿಕೊಟ್ಟಿದ್ದಾರೆ. ಒಂದೂವರೆ ಗಂಟೆಗಳ ಕಾಲ ನಗುಮೊಗದಲ್ಲೇ ಕಾಣುವ ಆ ಅಪ್ಪು ಮುಖ ಸಿನಿಮಾ ಥಿಯೇಟರ್ನಿಂದ ಹೊರಬಂದ ಬಳಿಕವೂ ಪ್ರೇಕ್ಷಕನ ಎದೆಯಲ್ಲಿ ಹಾಗೆ ಉಳಿಯುತ್ತಿದೆ.
ಇದನ್ನು ಓದಿ : Head Bush issue solved: ‘ಹೆಡ್ ಬುಶ್’ ವಿವಾದ ಅಂತ್ಯ; ಕ್ಷಮೆ ಕೋರಿ ಆಕ್ಷೇಪಾರ್ಹ ಪದ ತೆಗೆಯಲು ಒಪ್ಪಿದ ಚಿತ್ರತಂಡ
puneeth rajkumar amoghavarsha starrer gandhada gudi movie review rating in kannada