ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದ ತತ್ತರಿಸಿರುವ ರಾಜ್ಯದ ರೈತರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಗ್ ಗಿಫ್ಟ್ ಕೊಟ್ಟಿದ್ದಾರೆ. ರಾಜ್ಯದ ರೈತರಿಗೆ 3 ಲಕ್ಷ ರೂಪಾಯಿ ವರೆಗೆ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಸಾಲ ನೀಡಲು ಮುಂದಾಗಿದ್ದಾರೆ.

ಮುಂಗಾರು ಆರಂಭವಾಗುತ್ತಿದ್ದರೂ ಕೂಡ ಕೊರೊನಾ ಸೋಂಕಿನಿಂದಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿಯೇ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂಪಾಯಿ ಅಲ್ಪಾವಧಿ ಕೃಷಿ ಸಾಲ ನೀಡುವುದಾಗಿ ರಾಜ್ಯ ಸರಕಾರ ಘೋಷಿಸಿದ್ದು, ಹೆಚ್ಚುವರಿ ಸಾಲ ಪಡೆಯಲು ಕೂಡ ಅವಕಾಶವಿದೆ. ಆದರೆ 3 ಲಕ್ಷಕ್ಕಿಂತ ಅಧಿಕ ಸಾಲ ಪಡೆಯುವ ರೈತರು ಸಾಮಾನ್ಯ ಬಡ್ಡಿದರವನ್ನು ಪಾವತಿಸಬೇಕಾಗಿದೆ.

ಅಲ್ಲದೇ 2019ರ ಎಪ್ರಿಲ್ 1ರ ವರೆಗೆ ಪಡೆದಿರುವ ಸಾಲದ ಮೇಲಿನ ಬಡ್ಡಿದರವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ. ಆದರೆ ಸಹಕಾರಿ ಸಂಘಗಳ ಮೂಲಕ ಪಡೆದ ಸಾಲಕ್ಕೆ ಮಾತ್ರವೇ ಇದು ಅನ್ವಯವಾಗಲಿದೆ. ಅಲ್ಲದೇ ಕೃಷಿಯೇತರ ಸಾಲ ಪಡೆದವರು ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ.

ಇನ್ನು ಶೇ.25ರಷ್ಟು ಹೊಸ ರೈತರಿಗೆ ಸಾಲ ನೀಡುವುದಾಗಿ ಯಡಿಯೂರಪ್ಪ ಘೋಷಿಸಿದ್ದು, ಹೊಸ ಸಾಲದಲ್ಲಿ ಶೇ.24.10 ರಷ್ಟು ಸಾಲವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಕಡ್ಡಾಯವಾಗಿ ನೀಡಬೇಕೆಂದು ಸೂಚನೆಯನ್ನು ನೀಡಿದ್ದಾರೆ.

ಕೊರೊನಾ ಸೋಂಕಿನ ಸಂಕಷ್ಟದಲ್ಲಿದ್ದ ರೈತರಿಗೆ ರಾಜ್ಯ ಸರಕಾರ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಮೂಲಕ ನೆರವಾಗಿದೆ. ಅಲ್ಲದೇ ಸಾಲ ನೀಡಿರುವ ಕುರಿತು ವರದಿಯನ್ನು ಪ್ರತೀ 3 ತಿಂಗಳಿಗೊಮ್ಮೆ ರಾಜ್ಯ ಸರಕಾರಕ್ಕೆ ಸಲ್ಲಿಸುವಂತೆಯೂ ಸೂಚನೆಯನ್ನು ನೀಡಲಾಗಿದೆ.