(Mudugallu keshavanatheshvara) ಪ್ರಕೃತಿಯಲ್ಲಿನ ವಿಸ್ಮಯಗಳೇ ಅದ್ಭುತ ಅದನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ ಇದಕ್ಕೆ ಪೂರಕವೆಂಬಂತೆ ಪ್ರಕೃತಿಯಿಂದ ನಿರ್ಮಿತವಾದಂತಹ ಗುಹೆ ಆ ಗುಹೆಯೊಳಗೆ ನೆಲೆಸಿರುವವನು ಮಾತ್ರ ಈಶ ಅಂದ ಹಾಗೆ ನಾನು ಹೇಳಲು ಹೊರಟಿರುವುದು ಪ್ರಕೃತಿಯಿಂದಲೇ ನಿರ್ಮಿತವಾಗಿರುವ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ಗುಹಾಂತರ ದೇವಾಲಯದ ಬಗ್ಗೆ.
ಎತ್ತ ನೋಡಿದರು ಕಾನನದ ಸೊಬಗಿನ ನಡುವೆ ಡಾಂಬರು ಮಾಸಿರುವ ರಸ್ತೆ, ಜನರ ಸಂಚಾರವಿಲ್ಲದ ಕೇವಲ ಬೆರಳೆಣಿಕೆಯಷ್ಟು ಮನೆಗಳು ಇರುವಂಥಹ ಕುಗ್ರಾಮದ ನಡುವೆ ವಿರಾಜಮಾನನಾಗಿರುವ ಲಯಕರ್ತ ಕೇಶವನಾಥೇಶ್ವರ. ಮೂಡಗಲ್ಲು ಎಂಬ ಹೆಸರು ಹೇಳುವಂತೆ ಪ್ರಾಕೃತಿಕವಾಗಿ ನಿರ್ಮಾಣಗೊಂಡಿರುವ ಗುಹೆಯೊಳಗೆ ಪೂಜಿಸಲ್ಪಡುವ ಕೇಶವನಾಥೇಶ್ವರನ (Mudugallu keshavanatheshvara) ದರ್ಶನ ಪಡೆಯುವುದೇ ಒಂದು ವಿಸ್ಮಯ. ಗುಹೆಯೊಳಗೆ ಸುಮಾರು 50 ಆಡಿಗಳಷ್ಟು ವಿಶಾಲ ಜಾಗದಲ್ಲಿ ಹರಡಿರುವ ನೀರು, ಆ ನೀರಿನಲ್ಲಿ ಹಲವು ಬಗೆಯ ಮೀನುಗಳು ಜೊತೆಗೆ ಹಾವುಗಳು ಅತ್ತ ಇತ್ತ ಸಂಚರಿಸುತ್ತಿದ್ದರೆ ಯಾವುದೇ ಭಯವಿಲ್ಲದೆ ಹಲವಾರು ವರುಷಗಳಿಂದ ನೀರಿನಲ್ಲಿ ಸಾಗಿ ದೇವರಿಗೆ ಪೂಜೆ ಸಲ್ಲಿಸುವ ಅರ್ಚಕರು. ಒಂದೊಮ್ಮೆ ನೋಡಿದಾಗ ಭಯ ಹುಟ್ಟಿಸುತ್ತದೆ ಈ ವಾತಾವರಣ. ವಿಶೇಷವೇನೆಂದರೆ ಆರ್ಚಕರು ಹೇಳುವ ಪ್ರಕಾರ ಈ ಉರಗಗಳು ಯಾರಿಗೂ ಯಾವುದೇ ರೀತಿಯ ತೊಂದರೆಗಳನ್ನು ನೀಡಿಲ್ಲವಂತೆ. ಕತ್ತಲು ತುಂಬಿದ ಗುಹೆಯೊಳಗೆ ಕೇವಲ ದೇವರ ದೀಪದ ಬೆಳಕು ಬಿಟ್ಟರೆ ಬೇರೆ ಬೆಳಕಿನ ವ್ಯವಸ್ಥೆ ಇಲ್ಲ. ಯಾವುದೇ ಬೆಳಕಿನ ಶಕ್ತಿಯಿಲ್ಲದ ವಿದ್ಯುತ್ ಶಕ್ತಿ ಈ ಕೇಶವನಾಥೇಶ್ವರ. ಈ ಸುರಂಗ ಮಾರ್ಗದ ಹೊರ ಭಾಗದಲ್ಲಿ ನಿಂತು ನೋಡಿದರೆ ದೂರದಲ್ಲಿರುವ ಪರಶಿವನ ತೇಜಸ್ಸು ಮಿಂಚಿನೋಪಾದಿಯಲ್ಲಿ ಸೆಳೆಯುತ್ತದೆ. ನೀರಿನಲ್ಲಿ ನಿಂತುಕೊಂಡು ದೇವರ ದರುಶನ ಪಡೆಯುವುದರ ಜೊತೆಗೆ ಕಾಲಿಗೆ ಮುತ್ತಿಕ್ಕುವ ಮೀನುಗಳ ಆನುಭವ ಆದ್ಭುತವಾದಂತದ್ದು. ಶತ ಶತಮಾನಗಳ ಪೂರ್ವದಲ್ಲಿಯ ಈ ಉದ್ಭವ ಲಿಂಗವೇ ಇಲ್ಲಿನ ಕುತೂಹಲ ಹಾಗೂ ಆಕರ್ಷಣೆಯ ಕೇಂದ್ರ. ಗುಹೆಗೆ ಸಮಾನಾಂತರವಾಗಿ ಅಶ್ವಥಕಟ್ಟೆಯಿದ್ದು ರಾತ್ರಿ ವೇಳೆ ಅಶ್ವಥಕಟ್ಟೆಗೂ ಗುಹೆಗೂ ನೇರಾ ಬೆಳಕಿನ ರೇಖೆಗಳು ಹಾದುಹೋಗುವುದನ್ನು ಕಂಡಿರುವುದಾಗಿ ದೇವಳದ ಅರ್ಚಕರು ಹೇಳುತ್ತಾರೆ.

ಈ ಕ್ಷೇತ್ರದ ಇತಿಹಾಸದ ಕುರಿತು ಯಾವುದೇ ಲಿಖಿತ ಮೂಲಗಳು ಇಲ್ಲದಿದ್ದರೂ ಕೂಡಾ ತುಂಬಾ ಪ್ರಾಚೀನ ಗುಹಾಂತರ ದೇವಾಲಯ ಇದು ಎನ್ನಲಾಗಿದೆ. ಶಿವ ಈ ಗುಹೆಯನ್ನು ಆಶ್ರಯಿಸಿ ಕಾಶಿಯನ್ನು ತಲುಪಿದ್ದಾನೆ ಎನ್ನುವ ಪ್ರತೀತಿ ಇದೆ. ಅಂತೆಯೇ ಇಲ್ಲಿ ಹಲವಾರು ಋಷಿ ಮುನಿಗಳು ತಪಸ್ಸನ್ನಾಚರಿಸಿದ ನಿದರ್ಶನಗಳು ಇವೆ ಎಂದು ಹೇಳಲಾಗಿದೆ. ಬ್ರಿಟಿಷ್ ಅಧಿಕಾರಿಯಾದ ಕರ್ನಲ್ ಲಾರ್ಡ್ ಮೆಕ್ಕಿಂಗ್ ಹಲವು ವರ್ಷಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದರಂತೆ. ನಾವೊಮ್ಮೆ ಕೇಳಿದಾಗ ಅರ್ಚಕರು ಈ ದೇವಾಲಯದ ಇತಿಹಾಸವನ್ನು ಬಿಡಿಬಿಡಿಯಾಗಿ ವಿವರಿಸುತ್ತಾರೆ.

ಗತಪೂವ ಕಾಲದಲ್ಲಿ ಓರ್ವ ಭೂಮಾಲಿಕರ ಗದ್ದೆಗೆ ನಿಗೂಢ ಪ್ರಾಣಿಯಿಂದ ಹಾನಿಯಾಗುತ್ತಿತ್ತಂತೆ. ಆ ಪ್ರಾಣಿಯನ್ನು ಹಿಡಿಯಬೇಕೆಂದು ಭೂಮಾಲಿಕನು ರಾತ್ರಿ ಹೊತ್ತು ಕಾದು ಕುಳಿತ ಸಂದರ್ಭ ಒಂದು ಗೋವು ಗದ್ದೆಗೆ ಬರುವುದನ್ನು ಅರಿತ ಭೂಮಾಲಿಕ ಗೋವನ್ನು ಬೆನ್ನತ್ತಿ ಬರುತ್ತಾನೆ. ಆಗ ಗೋವು ಅಲ್ಲಿರುವ ಗುಹೆಯ (Mudugallu keshavanatheshvara) ಒಳಗೆ ಪ್ರವೇಶಿಸುತ್ತದೆ. ಗೋವು ಹುಹೆಯ ಒಳಗೆ ಪ್ರವೇಶಿಸುವುದನ್ನು ಕಂಡ ಭೂಮಾಲಿಕನು ಗುಹೆಯ ಒಳಗೆ ಹೊಕ್ಕು ಸಾಕಷ್ಟು ದೂರ ಗೋವನ್ನು ಬೆನ್ನಟ್ಟಿ ಹೋಗುತ್ತಾನೆ. ಸ್ವಲ್ಪ ದೂರ ಕ್ರಮಿಸಿದಾಗ ಗೋವು ಕಣ್ಮರೆಯಾಗುತ್ತದಂತೆ. ಕತ್ತಲೆ ಗುಹೆಯೊಳಗೆ ಬಂಧಿಯಾಗಿರುವ ಭೂಮಾಲಿಕನು ಅನ್ಯ ಮಾರ್ಗ ಕಾಣದೆ ಭಗವಂತನ ಸ್ಮರಣೆ ಮಾಡುತ್ತಾನೆ. ಇದೇ ಸಂದರ್ಭದಲ್ಲಿ ಗುಹೆಯ ಹೊರ ಭಾಗದಿಂದ ಸಣ್ಣ ಜ್ಯೋತಿಯೊಂದು ಪ್ರಕಾಶಿಸಲು ಆರಂಭಿಸುತ್ತಿದಂತೆ. ಅದೇ ಜ್ಯೋತಿಯ ಬೆಳಕನ್ನು ಅನುಸರಿಸಿಕೊಂಡು ಭೂಮಾಲಿಕನು ಗುಹೆಯಿಂದ ಹೊರಬರುತ್ತಾನೆ. ದೇವರ ಚೈತನ್ಯದಿಂದ ಗುಹೆಯಿಂದ ಹೊರಬಂದ ಭೂಮಾಲಿಕನು ವಿಸ್ಮಿತನಾಗುತ್ತಾನೆ. ನಂತರದಲ್ಲಿ ಗೋವು ದಾಳಿಮಾಡಿದ ಗದ್ದೆಯನ್ನು ದೇವರಿಗಾಗಿ ಉಂಬಳಿ ಬಿಟ್ಟಿದ್ದಾನೆ ಎನ್ನುವುದು ಇಲ್ಲಿನ ಪ್ರತೀತಿ.

ಅರ್ಚಕರು ಹೇಳುವಂತೆ ಏಳು ಅಡಿಯಷ್ಟು ಎತ್ತರದ ಈ ಸುರಂಗ ಹಲವಷ್ಟು ದೂರ ಇದೆಯಂತೆ. ಶಿವನ ವಿಗ್ರಹದ (Mudugallu keshavanatheshvara) ಹಿಂದೆ ಯಾರೂ ಕೂಡಾ ಇನ್ನೂ ಹೋಗುವ ಧೈರ್ಯ ಮಾಡಿಲ್ಲ. ಆದರೆ ಭಯವನ್ನು ಹುಟ್ಟಿಸುವ ಕತ್ತಲು, ನೀರಿನ ಒರತೆ ಮಾತ್ರ ಕಾಣಸಿಗುತ್ತದೆ. ಒಂದು ಅಡಿ ನೀರಿನಲ್ಲಿಯೇ ಶಿವನ ಸಮೀಪ ಸಾಗಿ ಪೂಜೆ ನೀಡಿ ಪ್ರಾರ್ಥಿಸಲು ಸಾಕಷ್ಟು ಅವಕಾಶವಿದೆ.

ಎಳ್ಳಮಾವಾಸ್ಯೆ ವಿಶೇಷ ಹಾಗೂ ಜಾತ್ರಾ ಮಹೋತ್ಸವ
ಗುಹಾಂತರ ದೇವಾಲಯದ ಎದುರು ಪಾಶ್ರ್ಚದಲ್ಲಿ ದೇವಳ ಪ್ರಕಾರ ನಿರ್ಮಾಣ ಮಾಡಲಾಗಿದೆ. ಇಲ್ಲಿ ಪರಿವಾರ ದೇವರುಗಳ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿ ಎಳ್ಳಮಾವಾಸ್ಯೆಯ ದಿನ ಇಲ್ಲಿ ವಿಶೇಷವಾದ ಜಾತ್ರೆ ನಡೆಯುತ್ತದೆ. ಸಾರಿಗೆ ವ್ಯವಸ್ಥೆ ಇಲ್ಲದಿದ್ದರೂ ಭಕ್ತಾದಿಗಳು ನಿರ್ಜನ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲೆ ಬಂದು ಬೆಳಿಗ್ಗೆ 4 ಗಂಟೆಯಿಂದಲೇ ತೀರ್ಥಸ್ನಾನದಲ್ಲಿ ನಿರತರಾಗುತ್ತಾರೆ. ಅಂದು ವಿಶೇಷವಾದ ಪೂಜೆ ಪುನಸ್ಕಾರಗಳು ಕೇಶವನಾಥ ಸ್ವಾಮಿಗೆ ಸಲ್ಲಿಸಲ್ಪಡುತ್ತದೆ. ಗೆಂಡಸೇವೆ, ಮೈದರ್ಶನ ಸೇವೆ ಮೊದಲಾದ ಸೇವಾ ಪ್ರಕಾರಗಳು ಇಲ್ಲಿ ನಡೆಯುತ್ತವೆ. ಈ ಕ್ಷೇತ್ರಕ್ಕೂ ಮುದೂರು ಸಮೀಪದ ಬೆಳ್ಕಲ್ಗೂ ಅವಿನಾಭಾವ ಸಂಪರ್ಕ ಸಂಬಂಧವಿದೆ ಎನ್ನಲಾಗುತ್ತದೆ. ಬೆಳ್ಕಲ್ ಕ್ಷೇತ್ರಕ್ಕೆ ಹೋಗಿಬಂದ ಭಕ್ತರು ಇಲ್ಲಿಗೆ ಬಂದ ನಂತರವೇ ದೇವರಿಗೆ ಮಹಾಮಂಗಳಾರತಿ ಮಾಡಲಾಗುತ್ತದೆಯಂತೆ. ಇದು ಪಾರಂಪರಿಕ ಕಟ್ಟುಕಟ್ಟಾಳೆ. ಎಳ್ಳಮಾವಾಸ್ಯೆ ಪೂಜೆ ಇಲ್ಲಿನ ವಿಶೇಷತೆಗಳಲ್ಲಿ ಒಂದು. ಕೇಶವನಾಥೇಶ್ವರ ದೇವಾಲಯಕ್ಕೂ ಇಲ್ಲೆ ಪಕ್ಕದಲ್ಲಿರುವ ಮೇಳ್ಯ ಕೆರೆಗೂ ಸಂಪರ್ಕವಿದ್ದು, ಈ ಕೆರೆಯಲ್ಲಿ ಎಳ್ಳಮವಾಸ್ಯೆ ಸ್ನಾನ ಮಾಡಲು ಸಹಸ್ರಾರು ಮಂದಿ ಭಕ್ತರು ವರ್ಷಂಪ್ರತಿ ಬರುತ್ತಾರೆ. ಪ್ರತೀ ವರ್ಷ ಎಳ್ಳಮವಾಸ್ಯೆ ದಿನದಂದು ಮೇಳ್ಯ ಕೆರೆಯಲ್ಲಿ ಹೂವಿನ ಎಸಳುಗಳು ತೇಲುತ್ತಿರುವುದನ್ನು ಕಾಣಬಹುದಂತೆ. ಸುತ್ತಲೂ ಕಲ್ಲು ಬಂಡೆಗಳಿಂದ ಕೂಡಿರುವ ಪ್ರದೇಶವಾಗಿರುವ ದೇವಾಲಯದಲ್ಲಿ ನೀರಿನ ಪ್ರಮಾಣ ವರ್ಷವಿಡೀ ಒಂದೇ ಪ್ರಮಾಣದಲ್ಲಿರುತ್ತದೆ. ಮಳೆಗಾಲದ ಸಂದರ್ಭದಲ್ಲಿ ಸ್ವಲ್ಪ ಮಟ್ಟಿನಲ್ಲಿ ನೀರಿನ ಪ್ರಮಾಣ ಏರಿಕೆಕಂಡರೂ ಕೂಡ ಬೇಸಗೆ ಸಮಯದಲ್ಲಿ ಒಂದು ಅಡಿಯಷ್ಟು ನೀರು ತುಂಬಿರುವುದು ಇಲ್ಲಿನ ವಿಶೇಷತೆಯನ್ನು ಎತ್ತಿ ತೋರಿಸುತ್ತದೆ.

ತಲುಪುವ ದಾರಿ:
– ಕುಂದಾಪುರದಿಂದ ಕೊಲ್ಲೂರು ಮಾರ್ಗವಾಗಿ ಕೆರಾಡಿ ತಲುಪಿ ಅಲ್ಲಿಂದ ಮೂಡಗಲ್ಲಿಗೆ ತೆರಳಬಹುದು.
– ಉಡುಪಿಯಿಂದ ಹಾಲಾಡಿ ಮಾರ್ಗವಾಗಿ ಕೆರಾಡಿ ತಲುಪಿ ಅಲ್ಲಿಂದ ಮೂಡಗಲ್ಲಿಗೆ ತೆರಳಬಹುದು.
ಇದನ್ನೂ ಓದಿ : The Story of the Abandoned Church:ಪ್ರವಾಸಿಗರಿಗೆ ಕುತೂಹಲ ಕೆರಳಿಸುತ್ತಿದೆ ಕರ್ನಾಟಕದ ಈ ತೇಲುವ ಚರ್ಚ್

(Mudugallu keshavanatheshvara) The wonders of nature are amazing and no one can imagine it. In addition to this, a cave made by nature is the only one who resides inside that cave. So I am going to tell you about Mudugallu Sri Keshavanatheshwara cave temple which is made by nature itself.