ಕುಂದಾಪುರ: (Hemmadi Student death) ವಿದ್ಯಾರ್ಥಿಯೋರ್ವ ಬಸ್ ನಿಂದ ಕೆಳಗೆ ಇಳಿಯುವ ಸಂದರ್ಭದಲ್ಲಿ ಆಯತಪ್ಪಿ ಬಸ್ ನ ಚಕ್ರದಡಿಗೆ ಸಿಲುಕಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕುಂದಾಪುರದ ಹೆಮ್ಮಾಡಿಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಕೋಟೇಶ್ವರ ಕಾಗೇರಿ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಸುದೀಪ್ (20 ವರ್ಷ) ಮೃತ ವಿದ್ಯಾರ್ಥಿ.
ಸಾಗರದಿಂದ ಕುಂದಾಪುರಕ್ಕೆ ತೆರಳುವ ಖಾಸಗಿ ಬಸ್ ನಲ್ಲಿ ಸುದೀಪ್ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಕಟ್ ಬೆಲ್ತೂರು ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದ ಸುದೀಪ್ ಬಸ್ ನೊಳಗೆ ಜನ ತುಂಬಿಕೊಂಡಿದ್ದರಿಂದ ಫೂಟ್ ಬೋರ್ಡ್ ಮೇಲೆ ನಿಂತು ಸಾಗುತ್ತಿದ್ದನು. ಹೆಮ್ಮಾಡಿಯಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ಮತ್ತೆ ಹತ್ತಿಸಿಕೊಳ್ಳಲಾಯಿತು. ಬಸ್ ಚಲಿಸಲು ಪ್ರಾರಂಭಿಸಿದ್ದು, ಈ ವೇಳೆ ಮಹಿಳೆಯೊಬ್ಬರು ಇಳಿಯದ ಹಿನ್ನಲೆಯಲ್ಲಿ ಮತ್ತೆ ಅವರನ್ನು ಇಳಿಸಲು ಬಸ್ ನಿಲ್ಲಿಸುತ್ತಿದ್ದು, ಈ ವೇಳೆ ಸುದೀಪ್ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ.
ಬಸ್ ಗೆ ಮುಂಭಾಗದಲ್ಲಿ ಮಾತ್ರವೇ ಬಾಗಿಲಿದ್ದ ಕಾರಣ ಮುಂಬದಿಯ ಬಾಗಿಲಲ್ಲಿ ನಿಂತಿದ್ದ ಸುದೀಪ್ ಬಸ್ ನ ಮುಂಬದಿಯ ಚಕ್ರದಡಿಯಲ್ಲಿ ಸಿಲುಕಿದ್ದಾನೆ. ಚಾಲಕ ವಿದ್ಯಾರ್ಥಿಯನ್ನು ಉಳಿಸುವ ಪ್ರಯತ್ನ ಮಾಡಿದ್ದರೂ ಸೊಂಟದ ಮೇಲೆ ಚಕ್ರ ಹರಿದ ಪರಿಣಾಮ ಸುದೀಪ್ ಗಂಭೀರ ಗಾಯಗೊಂಡಿದ್ದಾನೆ. ಅಲ್ಲದೇ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇನ್ನೂ ಕುಂದಾಪುರದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ಒಂದೇ ಸಮಯದಲ್ಲಿ ಪ್ರಾರಂಭವಾಗುವ ಕಾರಣದಿಂದಾಗಿ ಬೆಳಗ್ಗಿನ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಬಸ್ ಗಳು ತುಂಬಿಕೊಂಡು ಕೆಲವು ವಿದ್ಯಾರ್ಥಿಗಳು ಬಸ್ ನ ಫೂಟ್ ಬೋರ್ಡ್ ನ ಮೇಲೆಯೇ ನಿಂತು ಸಾಗುತ್ತಾರೆ. ಹೆಮ್ಮಾಡಿ ತಲ್ಲೂರು ಭಾಗದ ಮಕ್ಕಳಿಗೆ ಕುಂದಾಪುರಕ್ಕೆ ತೆರಳಲು ಬಸ್ಸಿನಲ್ಲಿ ಜಾಗವೇ ಇಲ್ಲದ ಕಾರಣ ಜೀವಭಯದಲ್ಲೇ ತೆರಳುವ ಅನಿವಾರ್ಯತೆ ಬಂದೊದಗಿದೆ. ಹೀಗಾಗಿ ಬೆಳಗ್ಗಿನ ವೇಳೆಯಲ್ಲಿ ಹೆಚ್ಚುವರಿ ಬಸ್ ಅನ್ನು ಒದಗಿಸಬೇಕು ಎಂದು ಸಾರ್ವಜನಿಕರು ಬೇಡಿಕೆಯನ್ನಿಟ್ಟಿದ್ದಾರೆ.
ಇದನ್ನೂ ಓದಿ : Bail for people in drug case: ಮಂಗಳೂರು ಡ್ರಗ್ಸ್ ಪ್ರಕರಣ: 13 ಮಂದಿಗೆ ಜಾಮೀನು
Hemmadi Student death: Hemmadi: Student died tragically after the bus broke down