ಬೆಂಗಳೂರು : ಡೇರಿ ಫಾರಂಗಳು ಹಾಗೂ ಗೋಶಾಲೆಗಳ ಸ್ಥಾಪನೆ ಹಾಗೂ ನಿರ್ವಹಣೆಗಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕೆಂಬ ಆದೇಶದ ಬೆನ್ನಲ್ಲೇ ರೈತರು ಗೊಂದಲಕ್ಕೆ ಸಿಲುಕಿದ್ದಾರೆ. ಆದ್ರೀಗ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮನೆಯಲ್ಲಿ ಜಾನುವಾರುಗಳನ್ನು ಸಾಕಲು ಯಾವುದೇ ಅನುಮತಿಯನ್ನು ಪಡೆಯುವುದು ಬೇಡ ಅಂತಾ ಸ್ಪಷ್ಟನೆಯನ್ನು ನೀಡಿದೆ.

ಡೇರಿ ಫಾರಂಗಳು 15 ಅಥವಾ ಅದಕ್ಕಿಂತ ಹೆಚ್ಚು ಹಾಲು ಕರೆಯುವ ಪ್ರಾಣಿಗಳನ್ನು ಹೊಂದಿದ್ದಲ್ಲಿ ಮಾತ್ರ ಮಾಲಿನ್ಯ ನಿಯಂತ್ರಣ ಮಂಡಳಿ ವ್ಯವಸ್ಥೆಗೆ ಒಳಪಡುತ್ತವೆ. ಆದರೆ, ರೈತರು ತಮ್ಮ ಮನೆಗಳಲ್ಲಿ ಸಾಕಿ ಹಾಲು ಕರೆಯುವ ಜಾನುವಾರುಗಳಿಗೆ ಅನುಮತಿ ಬೇಕಿಲ್ಲವೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನ (10.07.2020)ದಂತೆ ಗೋಶಾಲೆಗಳೆಂದರೆ, ದುರ್ಬಲ, ಅನಾರೋಗ್ಯ, ಗಾಯಗೊಂಡ, ಅಂಗವಿಕಲ ಹಾಗೂ ಅನಾಥ ಜಾನುವಾರುಗಳನ್ನು ಆರೈಕೆ ಮಾಡುವ ಪುನರ್ವಸತಿ ಕೇಂದ್ರಗಳಾಗಿದ್ದು, ಇಂತಹ ಕೇಂದ್ರಗಳು ಮಾತ್ರ ಮಾಲಿನ್ಯ ನಿಯಂತ್ರಣ ನಿರ್ವಹಣೆ ವ್ಯವಸ್ಥೆಗೆ ಒಳಪಡುತ್ತವೆ. ರಾಜ್ಯದ ರೈತ ಸಮುದಾಯ ಈ ವಿಷಯದಲ್ಲಿ ಅನಗತ್ಯವಾಗಿ ಆತಂಕಕ್ಕೆ ಒಳಗಾಗುವುದು ಬೇಡವೆಂದು ಮಂಡಳಿ ತಿಳಿಸಿದೆ.


ಡೇರಿ ಫಾರಂಗಳು ಹಾಗೂ ಗೋಶಾಲೆಗಳ ಸ್ಥಾಪನೆ ಹಾಗೂ ನಿರ್ವಹಣೆಗಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕೆಂಬ ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಮಂಡಳಿ ಈ ಸ್ಪಷ್ಟನೆ ನೀಡಿದೆ.