Udupi News : ಭಾರೀ ಮಳೆಯಲ್ಲೂ ಗದ್ದೆ ಉಳುಮೆ ಮಾಡಿದ ಉಡುಪಿ ಜಿ.ಪಂ. ಸಿಇಒ ಪ್ರಸನ್ನ

ಉಡುಪಿ : Udupi News : ಜಿಲ್ಲೆಯಾದ್ಯಂತ ಮತ್ತೊಮ್ಮೆ ಮಳೆಯು ಚುರುಕುಗೊಂಡಿದ್ದು, ಭಾರಿ ಮಳೆ ಆಗುತ್ತಿದೆ. ಈ ಬಾರಿ ಮಳೆಯು ವಿಳಂಬವಾದ ಕಾರಣ ತಡವಾಗಿ ಆರಂಭಗೊಂಡ ಭತ್ತದ ಕೃಷಿಯ ಚಟುವಟಿಕೆಗಳು, ಪ್ರಸ್ತುತ ಮಳೆಯ ನಡುವೆಯೂ ಚುರುಕಾಗಿ ನಡೆಯುತ್ತಿವೆ. ಕೆಲವು ಕಡೆಗಳಲ್ಲಿ ಭತ್ತದ ನಾಟಿ ಕೆಲಸವು ಮುಗಿದಿರುತ್ತದೆ. ಇನ್ನು ಹಲವಡೆ ತಡವಾದರೂ ಉತ್ತಮ ಮಳೆಯಾಗಿದ್ದರಿಂದ ಚುರುಕಿನಿಂದ ಗೆದ್ದೆ ಕೆಲಸಗಳು ನಡೆಯುತ್ತಿದೆ.

ಹಡಿಲು ಭೂಮಿ ಕೃಷಿಗೂ ತೊಂದರೆಯಾಗದ ಮಳೆ :
ನಮ್ಮ ಜಿಲ್ಲೆಯಲ್ಲಿ ಚಿಕ್ಕ ಹಿಡುವಳಿ, ಕೂಲಿಕಾರರ ಸಮಸ್ಯೆ ಹಾಗೂ ಲಾಭದಾಯಕವಲ್ಲದ ಕಾರಣದಿಂದಾಗಿ ಜನರು ಕೃಷಿಯಿಂದ ವಿಮುಖರಾಗಿ ಸಾವಿರಾರು ಎಕರೆ ಭತ್ತದ ಗದ್ದೆಗಳನ್ನು ಹಡಿಲು ಬಿಟ್ಟಿರುವುದನ್ನು ಗಮನದಲ್ಲಿರಿಸಿಕೊಂಡು, ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಸನ್ನ ಅವರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಂಜೀವಿನಿ ಹಾಗೂ ಕೃಷಿ ಇಲಾಖೆಗಳ ಮೂಲಕ ಹಡಿಲು ಭೂಮಿಯನ್ನು ಕೃಷಿ ಮಾಡುವ ಮಹತ್ವಾಕಾಂಕ್ಷಿ ಕಾರ್ಯಕ್ಕೆ ಒತ್ತು ನೀಡಿದ್ದಾರೆ. ಗ್ರಾಮ ಪಂಚಾಯತ್‌ವಾರು ಗುರಿಯನ್ನು ನಿಗದಿಗೊಳಿಸಿ, ಅಧೀನ ಸಿಬ್ಬಂದಿಗಳಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ಕಳೆದ ಎರಡು ತಿಂಗಳುಗಳಿಂದ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಈ ಮೂಲಕ ಈಗಾಗಲೇ 1034 ಎಕ್ರೆ ಭೂಮಿಯನ್ನು ಜಿಲ್ಲೆಯಲ್ಲಿ ಗುರುತಿಸಿ ಸಂಜೀವಿನಿ ಸದಸ್ಯರು ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಈ ಮೂಲಕ ಸುಸ್ಥಿರ ಅಭಿವೃದ್ಧಿಯ, ಸ್ವಾವಲಂಬನೆಯ ಹಾಗೂ ಪರಿಸರ ಪೂರಕವಾದ ಮಹತ್ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಹಲವಾರು ಕಡೆ ಈಗಾಗಲೇ ನೇರ ಬಿತ್ತನೆ ಮೂಲಕ ಹಾಗೂ ನಾಟಿಯ ಮೂಲಕ ಬೇಸಾಯ ಆರಂಭವಾಗಿದೆ.

ಇವತ್ತು ಕುಂದಾಪುರ ತಾಲೂಕಿನ ಅಂಪಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಡಾಳಿಯಲ್ಲಿ 12 ಎಕರೆ ಹಡಿಲು ಭೂಮಿಯಲ್ಲಿ ಭತ್ತದ ಕೃಷಿಯ ನಾಟಿ ಮಾಡುವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ಖುದ್ದಾಗಿ ಭಾಗವಹಿಸಿದ್ದರು. ಕುಂದ ನಾಡು ರೈತ ಉತ್ಪಾದಕ ಸಂಸ್ಥೆ ಹಾಗೂ ಅಂಪಾರು ರೋಟರಿ ಕ್ಲಬ್ ರವರ ಸಹಯೋಗದಲ್ಲಿ ವನಶ್ರೀ ಸಂಜೀವಿನಿ ಒಕ್ಕೂಟದ ನೂರಾರು ಸದಸ್ಯರು ಭತ್ತದ ನಾಟಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮವನ್ನು ಭತ್ತದ ನೇಜಿಯ ಕಟ್ಟನ್ನು ಬಿಚ್ಚಿ ವಿತರಿಸುವುದರ ಮೂಲಕ ಸಿಇಒ ಪ್ರಸನ್ನರವರು ಉದ್ಘಾಟಿಸಿದರು. ಸಮಾರಂಭದಲ್ಲಿ ಸ್ಥಳೀಯ ಕೃಷಿಕರನ್ನು ಸನ್ಮಾನಿಸಲಾಯಿತು. ಸಿಇಒ ರವರು ಹಡಿಲು ಭೂಮಿ ಕೃಷಿಯ ಮಹತ್ವದ ಬಗ್ಗೆ ವಿವರಿಸಿ, ಈ‌ ಉತ್ತಮವಾದ ಕಾರ್ಯದಲ್ಲಿ ಪಾಲ್ಗೊಂಡವರನ್ನು ಶ್ಲಾಘಿಸಿದರು. ಕುಂದನಾಡು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂತೋಷ್ ಬಲ್ಲಾಡಿರವರು ರೈತ ಉತ್ಪಾದಕ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಹಡಿಲು ಭೂಮಿ ಕೃಷಿಯ ಕಾರ್ಯದ ಬಗ್ಗೆ ತಿಳಿಸಿದರು. ಸಭಾ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಪದ್ಧತಿಗಳ ಅನಾವರಣವೂ ಆಯಿತು.

ಇದನ್ನೂ ಓದಿ : Mangalore News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ : ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ

ಇದನ್ನೂ ಓದಿ : Agumbe Ghat Travel Ban : ಆಗುಂಬೆ ಘಾಟ್‌ ರಸ್ತೆಯಲ್ಲಿ ಬಿರುಕು : ಭಾರೀ ವಾಹನ ಸಂಚಾರಕ್ಕೆ ನಿಷೇಧ

ಮಳೆಯ ನಡುವೆಯೇ ಗದ್ದೆಗೆ ಇಳಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಉಡುಪಿ ಜಿಲ್ಲಾಪಂಚಾಯತ್ ಪ್ರಸನ್ನ ರವರು ಭಾರಿ ಮಳೆಯ‌ನ್ನು ಲೆಕ್ಕಿಸದೇ ಗದ್ದೆಯಲ್ಲಿ ಕೋಣಗಳ ಮೂಲಕ ಉಳುಮೆ ಮಾಡುವುದರ ಮೂಲಕ ಹಾಗೂ ಭತ್ತದ ನೇಜಿಯನ್ನು ನೆಡುವುದರ ಮೂಲಕ ಹಡಿಲು ಭೂಮಿ ಕೃಷಿಯ ಮಾದರಿ ಕಾರ್ಯಕ್ಕೆ ಅರ್ಥಪೂರ್ಣ ಚಾಲನೆ ನೀಡಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಭಾರತಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ರೂಪ, ಕುಂದನಾಡು ರೈತ ಉತ್ಪಾದಕ ಸಂಸ್ಥೆಯ ಕಾರ್ಯದರ್ಶಿ, ಉಮೇಶ್ ಶಾನ್ಕಟ್, ರೋಟರಿ ಕ್ಲಬ್ ಅಧ್ಯಕ್ಷರಾದ ನವೀನ್ ಕುಮಾರ್ ಶೆಟ್ಟಿ , ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಶೆಟ್ಟಿ , ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ರೋಷನಿ ಶೆಟ್ಟಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯತ್ ನ ಸದಸ್ಯರು, ಸಂಜೀವಿನಿ ಸದಸ್ಯರು, ರೈತ ಉತ್ಪಾದಕ ಸಂಸ್ಥೆಯ ಸದಸ್ಯರು ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದು, ನೇಜಿಯನ್ನು ನೆಟ್ಟರು. ಕಾರ್ಯಕ್ರಮವನ್ನು ಗ್ರಾಮೀಣ ಸೊಗಡಿನ ಸಾಂಪ್ರದಾಯಿಕ ಶೈಲಿಯಲ್ಲಿ ವಿಶಿಷ್ಟವಾಗಿ ಆಯೋಜಿಸಲಾಗಿತ್ತು.

Udupi News: Udupi Zilla Panchayat CEO Prasanna plowed the field even in heavy rain

Comments are closed.