ನವದೆಹಲಿ : ಮಹಾಮಾರಿ ಕೊರೊನಾ ವೈರಸ್ ವಿಶ್ವದ ಜನರ ನಿದ್ದೆಗೆಡಿಸಿದೆ. ಚೀನಾದಲ್ಲಿ ಕೊರೊನಾ ವೈರಸ್ ಮರಣ ಮೃದಂಗವನ್ನು ಬಾರಿಸುತ್ತಿದ್ದು, ಮಹಾಮಾರಿಗೆ ಇದುವರೆಗೂ 26 ಮಂದಿ ಬಲಿಯಾಗಿದ್ದಾರೆ. ಚೀನಾದಲ್ಲಿ ಇದುವರೆಗೂ ಸುಮಾರು 830 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎನ್ನಲಾಗುತ್ತಿದೆ. ಡೆಡ್ಲಿ ವೈರಸ್ ಭೀತಿಯಿಂದಾಗಿ ಸುಮಾರು 13 ಮಹಾನಗರಗಳನ್ನೇ ಬಂದ್ ಮಾಡಲಾಗಿದ್ದು ಸುಮಾರು 41 ಮಿಲಿಯನ್ ಜನರ ಸಂಚಾರವನ್ನು ನಿರ್ಬಂಧಿಸಿದೆ.

ಈ ಪ್ರದೇಶಗಳಿಂದ ಜನರು, ವಾಹನಗಳು ಹೊರ ಹೋಗುವುದನ್ನು ಮತ್ತು ಇಲ್ಲಿಗೆ ಪ್ರವೇಶ ಮಾಡುವುದಕ್ಕೆ ಸರಕಾರ ನಿರ್ಬಂಧ ಹೇರಿದೆ. ಇನ್ನು ಪ್ರವಾಸಿ ತಾಣಗಳನ್ನು ಬಂದ್ ಮಾಡೋದಕ್ಕೆ ಚೀನಾ ಮುಂದಾಗಿದೆ. ಅದರಲ್ಲೂ ಚೀನಾದ ಪ್ರಮುಖ ಪ್ರವಾಸಿ ತಾಣಗಳಾಗಿರೋ ಮಿಂಗ್ ಗೋರಿಗಳು ಮತ್ತು ಯಿನ್ಯಾನ್ ಪಾಗೋಡಾಗಳನ್ನು ಬಂದ್ ಮಾಡೋದಾಗಿ ಸರಕಾರ ಹೇಳಿಕೊಂಡಿದೆ.

ಕೇರಳಕ್ಕೆ ಕಾಲಿಟ್ಟ ಡೆಡ್ಲಿ ವೈರಸ್ ?
ಕೇರಳ ರಾಜ್ಯಕ್ಕೂ ಡೆಡ್ಲಿ ವೈರಸ್ ಕರೊನಾ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಯುವಕನೋರ್ವ ಅತೀಯಾದ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ. ಆರಂಭದಲ್ಲಿ ಕೊಚ್ಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಕೂಡ ಆತನಲ್ಲಿ ಶಂಕಿತ ಕೊರೊನಾ ವೈರಸ್ ಪತ್ತೆಯಾಗಿದೆ. ಹೀಗಾಗಿ ಸೋಂಕಿತ ವ್ಯಕ್ತಿಯನ್ನು ಕಲಾಮೆಸ್ಸರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಯುವಕ ಇತ್ತೀಚಿಗಷ್ಟೇ ಚೀನಾದಿಂದ ವಾಪಾಸಾಗಿದ್ದ ಎನ್ನಲಾಗುತ್ತಿದೆ. ಯುವಕನ ರಕ್ತದ ಮಾದರಿಯನ್ನು ಈಗಾಗಲೇ ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಸೋಂಕು ತಗುಲಿರೋ ಶಂಕೆ ವ್ಯಕ್ತವಾಗಿರೋ ಹಿನ್ನೆಲೆಯಲ್ಲಿ ಯುವಕನಿಗೆ ಪ್ರತ್ಯೇಕವಾಗಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಎಂದು ವರದಿಯಾಗಿದೆ.