ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಧಾನ…! ಚುನಾವಣೆ ಟಿಕೇಟ್ ಸಿಗದ್ದಕ್ಕೆ ತಲೆಬೋಳಿಸಿಕೊಂಡ ನಾಯಕಿ…!!

ಪಂಚ ರಾಜ್ಯಗಳಲ್ಲಿ ಚುನಾವಣೆ ಕಾವು ಜೋರಾಗಿದ್ದು, ಕೇರಳ ಕಾಂಗ್ರೆಸ್ ನಲ್ಲಿ ಟಿಕೇಟ್ ಗಾಗಿನ ಜಗಳ ಬೀದಿಗೆ ಬಿದ್ದಿದೆ. ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೇಟ್ ಸಿಗದ್ದಕ್ಕೆ ಮನನೊಂದ ಕಾಂಗ್ರೆಸ್ ನಾಯಕಿ ಕಚೇರಿ ಮುಂದೇ ತಲೆಬೋಳಿಸಿಕೊಂಡ ಪ್ರತಿಭಟನೆಗೆ ಮುಂದಾಗಿದ್ದಾರೆ.

ಕೇರಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಿಕಾ ಸುಭಾಷ್ ಟಿಕೇಟ್ ವಂಚಿತರಾಗಿದ್ದು, ಆಕ್ರೋಶದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಲತಿಕಾ ಕಾಂಗ್ರೆಸ್ ಕಚೇರಿ ಮುಂದೆಯೇ ತಲೆಬೋಳಿಸಿಕೊಂಡು ಪ್ರತಿಭಟನೆ ನಡೆಸಿ, ಕಾಂಗ್ರೆಸ್ ನಲ್ಲಿ ಪಕ್ಷಕ್ಕಾಗಿ ದುಡಿಯುವ ಮಹಿಳೆಯರಿಗೆ ಬೆಲೆ ಇಲ್ಲ ಎಂಬ ನೋವು ತೋಡಿಕೊಂಡಿದ್ದಾರೆ.

ಲತಿಕಾ ಏಟ್ಟಮಾನೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದರು. ಆದರೆ ರವಿವಾರ ಕಾಂಗ್ರೆಸ್ ಪಕ್ಷ ಬಿಡುಗಡೆಮಾಡಿದ ಚುನಾವಣಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಲತಿಕಾ ಹೆಸರು ಇರಲಿಲ್ಲ. ಇದರಿಂದ ನೊಂದ ಲತಿಕಾ ಪಟ್ಟಿ ಪ್ರಕಟವಾದ ಎರಡು ಗಂಟೆಯಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ತಲೆಬೋಳಿಸಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 6 ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ 86 ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ.  ಆಯ್ಕೆ ಪಟ್ಟಿ ಬಗ್ಗೆಯೂ ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಲತಿಕಾ, ಶೇಕಡಾ 20 ರಷ್ಟು ಸೀಟುಗಳನ್ನು ಮಹಿಳೆಯರಿಗೆ ನೀಡುವಂತೆ ಮೊದಲೆ ಮನವಿ ಮಾಡಿದ್ದೇವು.

ಜಿಲ್ಲೆಗಳಲ್ಲಿ ಒಂದೊಂದು ಸೀಟು ಮಹಿಳೆಯರಿಗೆ ನೀಡುವಂತೆ ಕೋರಲಾಗಿತ್ತು. ಆದರೆ ಮಹಿಳೆಯರನ್ನು ಕಡೆಗಣಿಸಲಾಗಿದೆ. ಕನಿಷ್ಠ ಒಂದು ಚುನಾವಣೆಯ ಟಿಕೇಟ್ ಕೂಡ ಪಡೆಯಲಾಗದ ಪಕ್ಷದ ಹುದ್ದೆಯಲ್ಲಿದ್ದು ಏನು ಪ್ರಯೋಜನ. ಅದಕ್ಕೆ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.

Comments are closed.