ನೈಜೀರಿಯಾ : ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಕೊರೊನಾ ವಿಶ್ವದ ಜನರನ್ನೇ ಭೀತಿಯಲ್ಲಿ ಮುಳುಗಿಸಿದೆ. ಆದ್ರೆ ಕೊರೊನಾಗಿಂತಲೂ ಭೀಕರವೆನಿಸಿರೊ ಲಾಸ್ಸಾ ವೈರಸ್ ಇದೀಗ ಸದ್ದಿಲ್ಲದೇ ಜನರನ್ನು ಬಲಿಪಡೆಯುತ್ತಿದೆ.

ಹೌದು, ಆಫ್ರಿಕಾದ ನೈಜಿರಿಯಾದಲ್ಲಿ ಇದೀಗ ಲಾಸ್ಸಾ ವೈರಸ್ ಬಾರೀ ಸದ್ದು ಮಾಡುತ್ತಿದೆ. ಈಗಾಗಲೇ 41 ಮಂದಿಯನ್ನು ಬಲಿ ಪಡೆದಿರೋ ಲಾಸ್ಸಾ ಸೋಂಕು 258 ಮಂದಿಗೆ ತಗುಲಿರುವುದು ದೃಢಪಟ್ಟಿದೆ. 2020ಕ್ಕೆ ಕಾಲಿರಿಸುತ್ತಿದ್ದಂತೆಯೇ ನೈಜೀರಿಯಾದ ಸುಮಾರು 19 ರಾಜ್ಯಗಳಲ್ಲಿ ಲಾಸ್ಸಾ ವೈರಸ್ ಸೋಂಕು ಹರಡಿದೆ.

ಜನರನ್ನು ಮಾತ್ರವಲ್ಲದೇ ಆರೋಗ್ಯ ಕಾರ್ಯಕರ್ತರಲ್ಲಿಯೂ ಸೋಂಕು ಪತ್ತೆಯಾಗಿದೆ. ಲಾಸ್ಸಾ ವೈರಸ್ ಸಾಮಾನ್ಯವಾಗಿ 11 ರಿಂದ 40 ವರ್ಷದೊಳಗಿನವರಲ್ಲಿಯೇ ಹೆಚ್ಚಾಗಿ ಕಂಡುಬರುತ್ತಿದೆ.

ಲಾಸ್ಸಾ ಸೋಂಕು ತಗುಲಿದ್ರೆ, ರಕ್ತಶ್ರಾವ, ಸುಸ್ತು, ತಲೆನೋವು, ವಾಂತಿ, ಸ್ನಾಯು ಸೆಳೆತದ ಜ್ವರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದ್ರೆ ಲಾಸ್ಸಾ ವೈರಸ್ ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ. ಹೀಗಾಗಿಯೇ ಪಶ್ಚಿಮ ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ವರ್ಷಂಪ್ರತಿ 1 ರಿಂದ 3 ಲಕ್ಷ ಮಂದಿಗೆ ಈ ಸೋಂಕು ತಗಲುತ್ತಿದ್ದು, 5,000ಕ್ಕೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆ ಅಂತ ಯುಎಸ್ ನ ರೋಗ ನಿಯಂತ್ರಣ ಕೇಂದ್ರ ತಿಳಿಸಿದೆ.

ಈ ವೈರಸ್ ಆರಂಭದಲ್ಲಿ ಉತ್ತರ ನೈಜಿರಿಯಾದ ಲಾಸ್ಸಾ ಪಟ್ಟಣದಲ್ಲಿ ಕಾಣಿಸಿಕೊಂಡಿತ್ತು. ಹೀಗಾಗಿಯೇ ಈ ವೈರಸ್ ಗೆ ಲಾಸ್ಸಾ ಅಂತಾ ಕರೆಯಲಾಗುತ್ತಿದೆ. ಕೊರೊನಾ ವೈರಸ್ ಚೀನಾವನ್ನು ನಡುಗಿಸಿದ ಬೆನ್ನಲ್ಲೇ ವಿಶ್ವ ಲಾಸ್ಸಾ ವೈರಸ್ ವಿರುದ್ದ ಹೋರಾಡುವುದಕ್ಕೆ ಸಜ್ಜಾಗಬೇಕಿದೆ.