ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದು, ಜನತೆ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿಯೂ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ದಟ್ಟವಾಗುತ್ತಿದೆ.

70 ಶಾಸಕರ ಸಂಖ್ಯಾಬಲವನ್ನು ಹೊಂದಿರುವ ದೆಹಲಿ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೇರಲು 36 ಶಾಸಕರ ಸರಳ ಬಹುಮತ ಅಗತ್ಯವಿದೆ. ಇದೀಗ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿಗೆ ಮತದಾರರ ಮಣೆ ಹಾಕಿರುವುದು ಸ್ಪಷ್ಟವಾಗುತ್ತಿದೆ. ಬಿಜೆಪಿ ಕಳೆದ ಚುನಾವಣೆಗಿಂತ ಕೊಂಚ ಸುಧಾರಣೆಯನ್ನು ಕಂಡಿದೆ. ಈ ಬಾರಿಯ ಚುನಾವಣೆಯಲ್ಲಿ 20ಕ್ಕೂ ಅಧಿಕ ಸ್ಥಾನಗಳನ್ನು ಪಡೆಯಲಿದೆ ಅಂತಾ ಸಮೀಕ್ಷೆಗಳು ಹೇಳುತ್ತಿವೆ. ಇನ್ನು ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು ಕೇವಲ 2 ಶಾಸಕರು ಈ ಬಾರಿ ಆಯ್ಕೆಯಾಗುವುದು ಅಸಾಧ್ಯ ಎನ್ನಲಾಗುತ್ತಿದೆ.

ದೆಹಲಿಯಲ್ಲಿ ಕೇಜ್ರಿವಾಲ್ ನೇತೃತ್ವದ ಸರಕಾರ ಮಾಡಿದ ಹಲವು ಯೋಜನೆಗಳು ಆಮ್ ಆದ್ಮಿ ಕೈ ಹಿಡಿದಿದೆ. ಶತಾಯಗತಾಯ ಅಧಿಕಾರ ಹಿಡಿಯಲು ಹವಣಿಸಿದ್ದ ಬಿಜೆಪಿಗೆ ಈ ಬಾರಿಯೂ ಅಧಿಕಾರ ಸಿಗೋದು ಡೌಟು. ಚುನಾವಣೋತ್ತರ ಸಮೀಕ್ಷೆಯ ವರದಿ ಹೊರಬಿದ್ದಿದ್ದು, ದೆಹಲಿಯ ಚುನಾವಣಾ ಫಲಿತಾಂಶಕ್ಕಾಗಿ ದೇಶದ ಜನರೇ ಕಾತರರಾಗಿದ್ದಾರೆ.