ದೆಹಲಿ: ನೀವು ವಿದೇಶದಿಂದ ಹಿಂತಿರುಗುತ್ತಿದ್ದೀರಾ? ಏರ್‍ಪೋರ್ಟನಲ್ಲಿ ಚೆಕ್‍ಅಪ್‍ಗೆ ಒಳಗಾಗಿ ಕ್ವಾರಂಟೈನ್ ಮುದ್ರೆ ಒತ್ತಿಸಿಕೊಳ್ಳೋ ಮುನ್ನ ಎಚ್ಚರ. ದೆಹಲಿಯಲ್ಲಿ ವಿದೇಶದಿಂದ ಹಿಂತಿರುಗುವ ವೇಳೆ ಕ್ವಾರಂಟೈನ್ ಮುದ್ರೆ ಒತ್ತಿಸಿಕೊಂಡ ಕಾಂಗ್ರೆಸ್ ವಕ್ತಾರೊಬ್ಬರು ಕ್ವಾರಂಟೈನ್ ಸೀಲ್‍ನಿಂದ ಉರಿ ಹಾಗೂ ನೋವಿಗೆ ತುತ್ತಾಗಿದ್ದು, ಏರ್‍ಪೋರ್ಟ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್‍ನ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ವಕ್ತಾರ ಮಧುಗೌಡ್ ಯಕ್ಷಿ ಶನಿವಾರ ವಿದೇಶದಿಂದ ಹಿಂತಿರುಗಿದ್ದು, ಈ ವೇಳೆ ದೆಹಲಿ ಏರ್‍ಪೋರ್ಟನಲ್ಲಿ ತಪಾಸಣೆ ಬಳಿಕ ಕ್ವಾಂರಟೈನ್ ಸೀಲ್ ಹಾಕಲಾಗಿತ್ತು. ಆದರೆ ಈ ಸೀಲ್ ಹಾಕಲು ಬಳಸಿದ ಇಂಕ್‍ನಿಂದ ಮಧುಗೌಡ್ ಕೈಯಲ್ಲಿ ಅಲರ್ಜಿಯಾಗಿದ್ದು, ಚರ್ಮ ಊದಿಕೊಂಡಿದ್ದು, ಸಹಿಸಲಸಾಧ್ಯವಾದ ನೋವು ಹಾಗೂ ತುರಿಕೆ ಕಂಡುಬಂದಿದೆ ಎಂದು ಮಧುಗೌಡ್ ದೂರಿದ್ದಾರೆ.
ಈ ಕುರಿತು ಮಧುಗೌಡ ಯಕ್ಷಿ ಪೋಟೋ ಜೊತೆ ಟ್ವೀಟ್ ಮಾಡಿದ್ದು, ನಾಗರೀಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಗಮನಕ್ಕೆ ತಂದಿದ್ದಾರೆ. ದಯವಿಟ್ಟು ದೆಹಲಿಯ ವಿಮಾನ ನಿಲ್ದಾಣದಲ್ಲಿ ಸೀಲ್ ಹಾಕಲು ಬಳಸುವ ಇಂಕ್ ಬಗ್ಗೆ ಗಮನ ಹರಿಸಿ ಎಂದು ಮನವಿ ಮಾಡಿದ್ದಾರೆ.
ಇನ್ನು ಮಧುಗೌಡ ಯಕ್ಷಿ ಟ್ವೀಟ್‍ಗೆ ತಕ್ಷಣ ಸ್ಪಂದಿಸಿರುವ ಸಚಿವ ಹರದೀಪ್ ಸಿಂಗ್ ಪುರಿ, ಇದನ್ನು ನನ್ನ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದ. ನಾನು ಈಗಲೇ ದೆಹಲಿ ಏರ್‍ಪೋರ್ಟ ಅಧಿಕಾರಿಗಳಿಗೆ ಇಂಕ್ ಪರಿಶೀಲನೆ ಹಾಗೂ ಬದಲಾವಣೆಗೆ ಸೂಚಿಸಿದ್ದಾಗಿ ಹೇಳಿದ್ದಾರೆ.
ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ದೆಹಲಿ ಏರ್‍ಪೋರ್ಟ ಅಧಿಕಾರಿಗಳು ಸೀಲ್‍ಗೆ ಬಳಸುವ ಇಂಕ್ ಪರಿಶೀಲನೆ ನಡೆಸಿದ್ದು,ಬೇರೆ ಇಂಕ್ ಬಳಕೆಗೆ ಮುಂದಾಗಿದ್ದಾರೆ. ಆದರೆ ಶನಿವಾರ ಬಳಸಿದ ಇಂಕ್ ನಿಂದ ಬೇರೆ ಪ್ರಯಾಣಿಕರಿಗೂ ಇದೇ ಸಮಸ್ಯೆಯಾಗಿದ್ಯಾ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇನ್ನು ಮಧುಗೌಡ್ ಯಕ್ಷಿ ಟ್ವೀಟ್‍ಗೆ ಹಲವರು ಬೆಂಬಲಿಸಿ ಟ್ವೀಟ್ ಮಾಡಿದ್ದು, ಓಡಿಸ್ಸಾ ಸೇರಿದಂತೆ ಹಲವು ಏರ್ ಪೋರ್ಟಗಳಲ್ಲಿ ಇದೇ ಸಮಸ್ಯೆ ಕಂಡುಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ನಾಗರೀಕ ವಿಮಾನಯಾನ ಸಚಿವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.