ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಕೊರೋನಾ ಸೋಂಕು…!

0

ಬೆಂಗಳೂರು: ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್ ಕೊರೋನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡ ಬೆನ್ನಲ್ಲೇ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.

ಈ ವಿಚಾರವನ್ನು ಸ್ವತಃ ಸಚಿವ ಸುರೇಶ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದು, ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದೆ. ರಿಪೋರ್ಟ ಪಾಸಿಟಿವ್ ಬಂದಿದೆ. ಹೀಗಾಗಿ ಕೆಲ ದಿನ ನಾನು ಕ್ವಾರಂಟೈನ್‍ನಲ್ಲಿ ಇರುತ್ತೇನೆ. ಯಾವುದೇ ರೋಗ ಲಕ್ಷಣವಿಲ್ಲ. ಹೀಗಾಗಿ ಯಾರು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಕೆಲದಿನದಿಂದ ತಮ್ಮ ಸಂಪರ್ಕಕ್ಕೆ ಬಂದವರು ಒಮ್ಮೆ ಆರೋಗ್ಯ ತಪಾಸಣೆಗೆ ಒಳಗಾಗುವಂತೆ ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ. ಕೆಲದಿನಗಳಿಂದ ಸುರೇಶ್ ಕುಮಾರ್ ರಾಜ್ಯದಾದ್ಯಂತ ಸಂಚಾರ ಮಾಡಿದ್ದು, ಬೇರೆ-ಬೇರೆ ಜಿಲ್ಲೆಗಳ ಶಾಲೆಗಳಿಗೆ ಭೇಟಿ ನೀಡಿದ್ದರು. ಅಲ್ಲದೇ ಕೇಂದ್ರ ಸರ್ಕಾರದ ಅನ್‍ಲಾಕ್ 5.0 ಅಡಿಯಲ್ಲಿ ಶಾಲೆಗಳ ಪುನರಾರಂಭಕ್ಕೆ ಅವಕಾಶ ನೀಡಲಾಗಿರೋದರಿಂದ ಈ ಕುರಿತು ಪೋಷಕರು,ಶಿಕ್ಷಕರ ಅಭಿಪ್ರಾಯ ಪಡೆಯಲು ಕೆಲದಿನದಿಂದ ಶಿಕ್ಷಕರು,ಅಧಿಕಾರಿಗಳ ಸಭೆ ಕೂಡ ನಡೆಸಿದ್ದರು.

ಇದೀಗ ಕೊರೋನಾ ಸೋಂಕಿಗೆ ತುತ್ತಾಗಿದ್ದು, ಹೋಂ ಕ್ವಾರಂಟೈನ್‍ನಲ್ಲಿರೋದಾಗಿ ಹೇಳಿದ್ದಾರೆ. ಸಚಿವ ಸುರೇಶ್ ಕುಮಾರ್ ಪುತ್ರಿ ಸ್ವತಃ ವೈದ್ಯೆಯಾಗಿದ್ದು, ಪ್ರಸ್ತುತ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಅವರು ಕೊರೋನಾ ಸೋಂಕಿತರ ಚಿಕಿತ್ಸೆಯಲ್ಲೇ ತೊಡಗಿಕೊಂಡಿದ್ದು, ಕೆಲದಿನಗಳ ಹಿಂದೆ ಸ್ವತಃ ಸಚಿವ ಸುರೇಶ್ ಕುಮಾರ್ ಈ ವಿಚಾರವನ್ನು ಹಂಚಿಕೊಂಡಿದ್ದರು.

ರಾಜ್ಯ ಸಚಿವ ಸಂಪುಟದಲ್ಲಿ ಸಿಎಂ ಬಿಎಸ್‍ವೈ, ಆರೋಗ್ಯ ಸಚಿವ ಶ್ರೀರಾಮಲು, ಡಿಸಿಎಂ ಗೋವಿಂದ್ ಕಾರಜೋಳ್ ಸೇರಿದಂತೆ ಹಲವರು ಕೊರೋನಾ ಸೋಂಕಿಗೆ ತುತ್ತಾಗಿದ್ದು, ಈಗಾಗಲೇ ಚೇತರಿಸಿಕೊಂಡಿದ್ದಾರೆ. ಇನ್ನು ಕಾಂಗ್ರೆಸ್ ನಾಯಕರಾದ ಸಿದ್ಧರಾಮಯ್ಯ, ಡಿಕೆಶಿ ಕೂಡ ಕೊರೋನಾದಿಂದ ಬಳಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

Leave A Reply

Your email address will not be published.