ನವದೆಹಲಿ: ಉಸಿರಾಟದ ಸಮಸ್ಯೆಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಏಮ್ಸ್ ಆಸ್ಪತ್ರೆ ದಾಖಲಾಗಿದ್ದಾರೆ.
ಕೊರೊನಾ ಸೋಂಕಿನಿಂದ ಇತ್ತೀಚಿಗಷ್ಟೆ ಗುಣಮುಖರಾಗಿದ್ದ ಅಮಿತ್ ಶಾ ಅವರಿಗೆ ಇದೀಗ ಮತ್ತೆ ಉಸಿರಾಟ ತೊಂದರೆ ಕಾಣಿಸಿಕೊಂಡ ಕಾರಣ ಶನಿವಾರ ರಾತ್ರಿ 11 ಗಂಟೆಗೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಮಿತ್ ಶಾ ಅವರಿಗೆ ಆಗಸ್ಟ್ 2ರಂದು ಕೊರೊನಾ ಪಾಸಿಟಿವ್ ಬಂದಿತ್ತು. ಇದನ್ನು ಟ್ವೀಟ್ ಮಾಡುವ ಮೂಲಕ ದೃಢಪಡಿಸಿದ್ದ ಅಮಿತ್ ಶಾ, ನನಗೆ ಕೊರೊನಾ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ತಿಳಿಸಿದ್ದರು. ಈ ನಂತರ ಅವರಿಗೆ ಅಗಸ್ಟ್ 14ರಂದು ಕೊರೊನಾ ಬರದಿ ನೆಗೆಟಿವ್ ಬಂದಿತ್ತು. ಆದ ಕಾರಣ ಮತ್ತೆ ಟ್ವೀಟ್ ಮಾಡಿದ್ದ ಅಮಿತ್ ಶಾ ನನಗೆ ಕೊರೊನಾ ವರದಿ ನೆಗೆಟಿವ್ ಬಂದ ಕಾರಣ ಹೋಂ ಐಸೊಲೇಶನ್‍ನಲ್ಲಿ ಇರಲಿದ್ದೇನೆ ಎಂದು ಟ್ವೀಟ್ ಮಾಡಿ ತಿಳಿಸಿದ್ದರು.
ಇದಾದ ಬಳಿಕ ಅಗಸ್ಟ್ 18ರಂದು ಮಧ್ಯ ರಾತ್ರಿ ಮತ್ತೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಅಂದು ಪತ್ರಿಕಾ ಪ್ರಕಟನೆ ಹೊರಡಿಸಿದ್ದ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ, ಅಮಿತ್ ಶಾ ಅವರಿಗೆ ಕಳೆದ 3-4 ದಿನಗಳಿಂದ ಮೈ-ಕೈ ನೋವು, ಸುಸ್ತು ಕಾಣಿಸಿಕೊಂಡ ಹಿನ್ನೆಲೆ ಪೋಸ್ಟ್ ಕೋವಿಡ್ ಕೇರ್ ಗೆ ದಾಖಲಿಸಿಕೊಳ್ಳಲಾಗಿದೆ. ಅವರ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಏಮ್ಸ್ ಆಸ್ಪತ್ರೆಯ ಪೋಸ್ಟ್ ಕೋವಿಡ್ ಕೇರ್ ಗೆ ದಾಖಲಿಸಿಕೊಳ್ಳಲಾಗಿದೆ. ಅವರು ಆರಾಮಾಗಿದ್ದು, ಆಸ್ಪತ್ರೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ತಿಳಿಸಲಾಗಿತ್ತು.
ಆಗಸ್ಟ್ 18ರಂದು ಆಸ್ಪತ್ರೆ ಸೇರಿದ್ದ ಅಮಿತ್ ಶಾ ಅವರು 13 ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಂಡು ಅಗಸ್ಟ್ 31ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಇದಾದ 13 ದಿನಗಳ ಬಳಿಕ ಮತ್ತೆ ಅಮಿತ್ ಶಾ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.