ಆಂಧ್ರಪ್ರದೇಶ: ಸೋಷಿಯಲ್ ಮೀಡಿಯಾದಲ್ಲಿ ಕಳೆದೆರಡು ದಿನದಿಂದ ಹಿರಿಯ ಮಹಿಳಾ ಅಧಿಕಾರಿಗೆ ಕಿರಿಯ ಪೊಲೀಸ್ ಅಧಿಕಾರಿ ಸೆಲ್ಯೂಟ್ ಮಾಡಿದ ಪೋಟೋ ವೈರಲ್ ಆಗಿದೆ.

ಇಷ್ಟಕ್ಕೂ ರ್ಯಾಂಕಿಂಗ್ ಆಧಾರದ ಮೇಲೆ ಗೌರವ ನೀಡಿದ ಈ ಪೋಟೋದಲ್ಲಿ ಅಂತಹ ವಿಶೇಷ ಏನಿದೆ ಅಂತ ಅಂದ್ಕೊಂಡ್ರಾ? ವಿಶೇಷ ಇರೋದು ಪೋಟೋದಲ್ಲಿ ಅಲ್ಲ . ಪೋಟೋದಲ್ಲಿರೋರಲ್ಲಿ. ಹೌದು ಹೀಗೆ ಸರ್ಕಲ್ ಇನ್ಸಪೆಕ್ಟರ್ ಒಬ್ಬರು ಎದೆಯುಬ್ಬಿಸಿ ಸೆಲ್ಯೂಟ್ ಹೊಡೆದಿದ್ದು ಕೇವಲ ಮೇಲಾಧಿಕಾರಿಗಲ್ಲ. ಬದಲಾಗಿ ಸಮವಸ್ತ್ರದಲ್ಲಿದ್ದ ತಮ್ಮ ಮಗಳಿಗೆ.

ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆಯುತ್ತಿರುವ ಇಲಾಖೆಯ ಕಾರ್ಯಕ್ರಮವೊಂದರಲ್ಲಿ ಮುಖಾಮುಖಿಯಾದ ತಂದೆ-ಮಗಳು ಸಮವಸ್ತ್ರದಲ್ಲಿ ಇದ್ದಿದ್ದರಿಂದ ಇಲಾಖೆಯ ನಿಯಮದಂತೆ ಪರಸ್ಪರ ಗೌರವ ವಿನಿಮಯ ಮಾಡಿಕೊಂಡಿದ್ದಾರೆ.

ಶ್ಯಾಮ್ ಸುಂದರ್ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದು, ಅವರ ಪುತ್ರಿ ಜೆಸ್ಸಿ ಪ್ರಶಾಂತಿ ಡೆಪ್ಯೂಟಿ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇತ್ತೀಚಿಗೆ ಇಲಾಖೆಗೆ ಸೇರಿದ ಪ್ರಶಾಂತಿ ಮೊದಲ ಬಾರಿಗೆ ಯೂನಿಫಾರಂನಲ್ಲಿ ತಂದೆ ಎದುರು ಕಾಣಿಸಿಕೊಂಡಿದ್ದು, ತಂದೆಯೂ ಗರ್ವದಿಂದ ಮಗಳಿಗೆ ಗೌರವ ಸಲ್ಲಿಸಿದ್ದಾರೆ.

ಈ ಪೋಟೋ proud moment for a father ಎಂಬ ಟ್ಯಾಗ್ ಲೈನ್ ಅಡಿ ಎಲ್ಲೆಡೆ ವೈರಲ್ ಆಗ್ತಿದ್ದು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಮಕ್ಕಳ ಸಾಧನೆ ಹೀಗಿರಬೇಕು ಅಂತ ಕೆಲವರು ಕಮೆಂಟ್ ಮಾಡಿದ್ದಾರೆ.
ಆಂಧ್ರಪ್ರದೇಶ ಪೊಲೀಸ್ ಇಲಾಖೆ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲೂ ಈ ಪೋಟೋ ಶೇರ್ ಮಾಡಿದ್ದು ಪ್ರೌಡ್ ಮೂಮೆಂಟ್ ಎಂದು ಹೇಳಿಕೊಂಡಿದೆ.