ಬೆಂಗಳೂರು: ಉಪಚುನಾವಣೆ ಮತದಾನ ಮುಗಿಯುತ್ತಿದ್ದಂತೆ ರಾಜ್ಯದ ಜನತೆಗೆ ಕರೆಂಟ್ ಶಾಕ್ ನೀಡಿದ ಸರ್ಕಾರ ದರ ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ಈಗ ಜಲಮಂಡಳಿ ನೀರಿನ ದರ ಏರಿಸಲು ಮುಂದಾಗಿದ್ದು, ಸರ್ಕಾರದ ಮುಂದೆ ಪ್ರಸ್ತಾಪವಿಟ್ಟಿದೆ.

ಕಳೆದ 6 ವರ್ಷಗಳಿಂದ ದರ ಏರಿಕೆ ಮಾಡದ ಜಲಮಂಡಳಿ ವಿದ್ಯುತ್ ದರ ಏರಿಕೆ ಬೆನ್ನಲ್ಲೇ, ವಿದ್ಯುತ್ ಬಿಲ್ ಕಟ್ಟುವ ಕಾರಣ ಮುಂದಿಟ್ಟುಕೊಂಡು ನೀರು ಪೊರೈಕೆ ದರ ಏರಿಸಲು ಸರ್ಕಾರಕ್ಕೆ ಮನವಿ ಮಾಡಿದೆ. ಪ್ರಸ್ತುತ ಬೆಂಗಳೂರು ಜಲಮಂಡಳಿ ಪ್ರತಿತಿಂಗಳು 46 ಕೋಟಿ ರೂಪಾಯಿ ವಿದ್ಯುತ್ ಬಿಲ್ ಭರಿಸುತ್ತದೆ.

ಸರ್ಕಾರ ವಿದ್ಯುತ್ ದರ ಏರಿಸಿರೋದರಿಂದ ಈ ಮೊತ್ತ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ಇದೇ ಕಾರಣವನ್ನು ಮುಂದಿಟ್ಟುಕೊಂಡು ನೀರಿನ ಪೊರೈಕೆ ದರ ಹೆಚ್ಚಿಸಲು ಮುಂದಾಗಿದೆ. 2020 ರ ಫೆಬ್ರವರಿಯಲ್ಲೇ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಕೆಯಾಗಿದೆ. ಆದರೆ ಸಿಎಂ ಬಿಎಸ್ವೈ ಕೊರೋನಾ ಹಾಗೂ ಲಾಕ್ ಡೌನ್ ಕಾರಣ ಮುಂದಿಟ್ಟು ಈ ಪ್ರಸ್ತಾಪಕ್ಕೆ ಅಸ್ತು ಎಂದಿಲ್ಲ.

ಹೀಗಾಗಿ ಇನ್ನೊಮ್ಮೆ ದರ ಹೆಚ್ಚಿಸಲು ಜಲಮಂಡಳಿ ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ ಪರಿಷ್ಕೃತ ಅಥವಾ ಏರಿಕೆಯ ಪ್ರಮಾಣವನ್ನು ಜಲಮಂಡಳಿ ಬಹಿರಂಗಪಡಿಸಿಲ್ಲ. ಈ ದರದಿಂದ ಜಲಮಂಡಳಿ ಪ್ರತಿತಿಂಗಳು 10-15 ಕೋಟಿ ನಷ್ಟ ಅನುಭವಿಸುತ್ತಿದೆ. ಪ್ರಸ್ತುತ ಜಲಮಂಡಳಿ, 8 ಸಾವಿರ ಲೀಟರ್ ನೀರಿನ ಪೊರೈಕೆಗೆ ಪ್ರತಿತಿಂಗಳು ಕಿಲೋಮೀಟರ್ ಗೆ 7 ರೂಪಾಯಿ ದರ ಪಡೆಯುತ್ತಿದೆ.

ಸಿಎಂ ಬಿಸ್ವೈ ಅನುಮತಿ ನೀಡಿದಲ್ಲಿ ನಗರದಲ್ಲಿ ಮತ್ತೆ ಜಲಮಂಡಳಿ ವಾಟರ್ ಬಿಲ್ ಏರಿಸಲಿದ್ದು, ಪರಿಷ್ಕೃತ ದರ ಜಾರಿಗೆ ಬರಲಿದೆ. ಇದರಿಂದ ಈಗಾಗಲೇ ಕೊರೋನಾ, ಕೆಲಸ ಕಡಿತದಂತಹ ಸಮಸ್ಯೆಯಿಂದ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಜನರಿಗೆ ವಿದ್ಯುತ್ ಹಾಗೂ ವಾಟರ್ ಬಿಲ್ ಬರೆ ಬಿದ್ದಂತಾಗಲಿದೆ.