ಕರ್ನಾಟಕದಲ್ಲಿ ಡಾ.ರಾಜ್ ಯಾರಿಗೆ ಗೊತ್ತಿಲ್ಲ ಹೇಳಿ. ಕರ್ನಾಟಕ ಮಾತ್ರವಲ್ಲ ಪ್ರಪಂಚದ ಸಿನಿಚರಿತ್ರೆಯಲ್ಲೇ ಡಾ.ರಾಜ್ ಕುಮಾರ್ ಗೆ ಸ್ಥಾನವಿದೆ. ಇಂತ ಅಣ್ಣಾವ್ರ ಪ್ರತಿಮೆ ಇಡೋ ವಿಚಾರಕ್ಕೆ ಶಾಸಕ ಎನ್.ಎ.ಹ್ಯಾರೀಸ್ ಲಘುವಾಗಿ ಮಾತನಾಡಿದ್ದಾರೆ ಎನ್ನಲಾಗಿದ್ದು, ಈ ವಿಡಿಯೋ ಕನ್ನಡಿಗರ ಸ್ವಾಭಿಮಾನದ ಹೆಸರಿನಲ್ಲಿ ವೈರಲ್ ಆಗಿ ವಿವಾದ ಸೃಷ್ಟಿಸಿದೆ.

ರಸ್ತೆಯ ವೃತ್ತವೊಂದರಲ್ಲಿ ಡಾ.ರಾಜ್ ಕುಮಾರ್ ಪ್ರತಿಮೆ ಸ್ಥಾಪಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಕಂಟ್ರಾಕ್ಟರ್ ಮುಂದೇ ಶಾಸಕ ಎನ್.ಎ.ಹ್ಯಾರೀಸ್ ಲಘುವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕನ್ನಡಿಗರು, ಸಿನಿಪ್ರಿಯರು ಹ್ಯಾರೀಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಮೆ ಇಡೋ ವಿಚಾರದಲ್ಲಿ ಅತ್ಯಂತ ಲಘುವಾಗಿ ಮಾತನಾಡಿದ ಹ್ಯಾರೀಸ್, ಪ್ರತಿಮೆ ಇಡೋದೆ ದೊಡ್ಡಕತೆ. ಅದರಲ್ಲಿ ಅದಕ್ಕೆ ಶೆಡ್ ಬೇರೆ ಮಾಡಿ ಕೊಡುವುದಕ್ಕೆ ಆಗುತ್ತಾ? ಅದಕ್ಕೆಲ್ಲ ಪ್ರೊಟಕ್ಷನ್ ಬೇರೆ ಕೊಡೋದಿಕ್ಕೆ ಆಗುತ್ತಾ? ಸುಮ್ನೆ ಸ್ಟ್ಯಾಚ್ಯು ಎಲ್ಲ ಮಾಡಿ ಮನೆಯಲ್ಲಿ ಇಟ್ಟರೇ ಆಗುತ್ತೆ. ಸುಮ್ನೆ ರಸ್ತೆಲೆಲ್ಲ ಯಾಕೆ? ಬುದ್ಧಿ ಇಲ್ಲ ಹೇಳಿದ್ರೆ ಬೇರೆ ತರ ತಗೋತಾರೆ ಎಂದು ಹ್ಯಾರೀಸ್ ಹೇಳಿದ್ದಾರೆ.

ಅಷ್ಟೇ ಅಲ್ಲ ಅವಾಗ್ಲು ಹೇಳಿದ್ದೆ, ಬೇಡಪ್ಪ ಅಂತ ಆದರೂ ಕೇಳದೆ ಹಣ ಕಲೆಕ್ಟ್ ಮಾಡಿದ್ರು. ಡಾ.ರಾಜ್ ಕುಮಾರ್ರೇ ಇದ್ದಾರೆ. ಅಂದ ಮೇಲೆ ಅವರ ಪ್ರತಿಮೆ ಎಲ್ಲ ಯಾಕೆ? ಹೇಳಿದ್ರೆ ಕೇಳಲ್ಲ ಎಂಬರ್ಥದಲ್ಲಿ ಗೊಣಗಾಡಿದ್ದಾರೆ. ಇದಕ್ಕೆ ಸಿನಿಮಾ ರಂಗದಿಂದ ಆರಂಭಿಸಿ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿದೆ.
ನಿರ್ಮಾಪಕರು, ನಿರ್ದೇಶಕರು, ನಟರು ಹಾಗೂ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶಾಸಕ ಎನ್.ಎ.ಹ್ಯಾರೀಸ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಡಾ.ರಾಜ್ ಕುಮಾರ್ ಪ್ರತಿಮೆ ಸ್ಥಾಪನೆಗೆ ಹ್ಯಾರೀಸ್ ಅನುಮತಿ ಬೇಕಾ? ಎಲ್ಲಿಂದಲೋ ಬಂದವರು ಕನ್ನಡಿಗರ ಕುಲದೈವದಂತಿರೋ ಅಣ್ಣಾವ್ರ ಬಗ್ಗೆ ಕಮೆಂಟ್ ಮಾಡೋದು ಬೇಕಾ ಎಂದೆಲ್ಲ ಪ್ರಶ್ನಿಸುತ್ತಿದ್ದಾರೆ.

ಒಟ್ಟಿನಲ್ಲಿ ನಗರದಲ್ಲಿ ಡಾ.ರಾಜ್ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಹ್ಯಾರೀಸ್ ಮಾತನಾಡಿದ ವಿಡಿಯೋ ಹೊಸ ವಿವಾದ ಸೃಷ್ಟಿಸಿದ್ದು ಎಲ್ಲೆಡೆ ಮತ್ತೆ ಪ್ರತಿಭಟನೆ ವಿರೋಧ ವ್ಯಕ್ತವಾಗೋ ಮುನ್ಸೂಚನೆ ನೀಡಿದ್ದು, ಹ್ಯಾರೀಸ್ ಕ್ಷಮೆಯಾಚಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.