ಬೆಂಗಳೂರು : ಆಕೆಯ ಪತಿ ಕಳೆದೊಂದು ವರ್ಷದ ಹಿಂದೆ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದರು. ಪತಿಯಿಲ್ಲದ ಕೊರಗು ಆಕೆಯನ್ನು ಸದಾ ಕಾಡುತ್ತಿತ್ತು. ಪತಿ ಯಿಲ್ಲದೇ ಬದುಕೇ ಬೇಡಾ ಅಂತಾ ನಿರ್ಧಾರ ಮಾಡಿಕೊಂಡಿದ್ದ ಪತ್ನಿ, ತನ್ನ ಮಕ್ಕಳಿಬ್ಬರ ಜೊತೆಗೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಡೆದಿದೆ.
ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯ ಪ್ರಕೃತಿ ಲೇಔಟ್ ನಿವಾಸಿಯಾಗಿರುವ ತಾಯಿ ವಸಂತ (40 ವರ್ಷ), ಮಗ ಯಶ್ವಂತ್ (15 ವರ್ಷ), ಮಗಳು ನಿಶ್ಚಿತ (06 ವರ್ಷ) ಸಾವನ್ನಪ್ಪಿದ ದುರ್ದೈವಿಗಳು. ಮನೆಯಲ್ಲಿನ ಒಂದು ಕೋಣೆಯಲ್ಲಿ ತಾಯಿ ವಸಂತ ಹಾಗೂ ಮಗಳು ನಿಶ್ಚಿತ ಸಾವನ್ನಪ್ಪಿದ್ರೆ, ಮಗ ಯಶ್ವಂತ್ ಮತ್ತೊಂದು ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿಎಂಟಿಸಿಯಲ್ಲಿ ಚಾಲಕ ಕಂ ಕಂಡಕ್ಟರ್ ಆಗಿದ್ದ ವಸಂತ ಪತಿ ಪ್ರಸನ್ನ ಕಳೆದ ಒಂದು ವರ್ಷದ ಹಿಂದೆ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದರು. ಪತಿಯ ಸಾವಿನ ನಂತರದಲ್ಲಿ ಮನನೊಂದಿದ್ದ ಪತಿ ವಸಂತ ಗಂಡನಿಲ್ಲದ ಜೀವನ ನನಗೆ ಬೇಡವೇ ಬೇಡ ಎಂದು ಹಲವರ ಬಳಿಯಲ್ಲಿ ಹೇಳಿಕೊಂಡಿದ್ದರು ಎನ್ನಲಾಗುತ್ತಿದ್ದು, ಈ ಕುರಿತು ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆಯನ್ನು ನಡೆಸಿದ್ದಾರೆ. ಅಲ್ಲದೇ ಈ ಕುರಿತು ಮಗನ ಆತ್ಮಹತ್ಯೆಗೆ ಪ್ರಚೋದನೆ, ಮಗಳ ಕೊಲೆ ಸೇರಿದಂತೆ ತಾಯಿ ವಸಂತ ವಿರುದ್ದ ಆತ್ಮಹತ್ಯೆ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮೂರು ವರ್ಷದ ಹಿಂದೆ ಮನೆ ಖರೀದಿ
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮೂಲದ ಪ್ರಸನ್ನ ಬಿಎಂಟಿಸಿಯಲ್ಲಿ ಕಂಡಕ್ಟರ್ ಹಾಗೂ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಹಲವು ವರ್ಷಗಳಿಂದಲೂ ಬೆಂಗಳೂರಿನಲ್ಲಿ ವಾಸವಾಗಿದ್ದರು. ತಾವು ವಾಸವಾಗಿದ್ದ ಮನೆಯನ್ನೇ ಕಳೆದ ಮೂರು ವರ್ಷದ ಹಿಂದೆ ಖರೀದಿ ಮಾಡಿದ್ದರು. ಕೂಡಿಟ್ಟ ಹಣ ಹಾಗೂ ಸಾಲ ಮಾಡಿ ಮನೆಯನ್ನು ಖರೀದಿಸಲು ಸುಮಾರು 15 ಲಕ್ಷ ಕೈಸಾಲ, 5 ಲಕ್ಷ ಬ್ಯಾಂಕ್ ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಪತಿಯ ಸಾವಿನ ನಂತರದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ವಸಂತ ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಮನೆ ಮಾರಾಟವಾಗುವ ಮೊದಲೇ ಕುಟುಂಬ ಸಾವಿಗೆ ಶರಣಾಗಿದೆ.
ಕೆರೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವಸಂತ
ಪತಿಯ ಸಾವನ್ನ ಅರಗಿಸಿಕೊಳ್ಳಲು ಸಾಧ್ಯವಾಗದ ಪತ್ನಿ ವಸಂತ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗುತ್ತಿದೆ. ಹೆಸರುಘಟ್ಟದ ಕೆರೆಗೆ ತನ್ನ ಮಗಳೊಂದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಸ್ಥಳೀಯರು ಆಕೆಗೆ ಬುದ್ದಿಮಾತು ಹೇಳಿ ಕಳುಹಿಸಿದ್ದರು. ತಾನು ಇನ್ಮುಂದೆ ಹೀಗೆ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಳು. ಆದರೆ ಗಂಡನ ಸಾವಿನಿಂದ ಸದಾ ಮನನೊಂದು ಮಾತುಗಳನ್ನೇ ಆಡುತ್ತಿದ್ದಳು. ಗಂಡನಿಲ್ಲದೇ ತಾನು ಏನನ್ನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದು. ತಾನು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ತಾನು ಯಾರಿಗೂ ತೊಂದರೆ ಕೊಡುವುದಿಲ್ಲ ಎಂದು ಹೇಳಿಕೊಂಡಿದ್ದರು. ಈ ವಿಚಾರದ ಕುರಿತು ಸ್ನೇಹಿತರು ಹಾಗೂ ಸಂಬಂಧಿಕರು ಬುದ್ದಿವಾದ ಹೇಳಿದ್ದರು.
ಇದನ್ನೂ ಓದಿ : ಪರೀಕ್ಷೆ ಬರೆದ ವಿದ್ಯಾರ್ಥಿನಿಯ ಬದುಕನ್ನೇ ಮುಗಿಸಿದ ಸಹಪಾಠಿ : ಪರೀಕ್ಷಾ ಕೊಠಡಿಯಲ್ಲಿ ನಡೆಯಿತು ಆಘಾತಕಾರಿ ಘಟನೆ
ಆತ್ಮಹತ್ಯೆಗೆ ಮಕ್ಕಳನ್ನು ಪ್ರೇರೆಪಿಸಿದ್ದ ತಾಯಿ
ಪತಿಯ ನೆನಪದಲ್ಲೇ ದಿನ ಕಳೆಯುತ್ತಿದ್ದ ವಸಂತ ತನ್ನಿಬ್ಬರು ಮಕ್ಕಳ ಹೆಗಲಿಗೆ ಸಾಲದ ಹೊರೆ ಬರಬಾರದು ಅನ್ನೋ ಕಾರಣಕ್ಕೆ ತನ್ನೊಂದಿಗೆ ಮಕ್ಕಳಿಗೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೆಪಿಸುತ್ತಿದ್ದಳು. ತಂದೆ ಇಲ್ಲದ ಬದುಕು ಸಾದ್ಯವಿಲ್ಲ ಎಂದು ತನ್ನ10 ವರ್ಷದ ಬಾಲಕ ಯಶ್ವಂತ್ ತಿಳಿಸಿ ಆತನನ್ನು ಆತ್ಮಹತ್ಯೆ ಮಾಡಿಕೊಳ್ಳಲು ಒಪ್ಪಿಸಿದ್ದಾಳೆ. ಆದರೆ ಮೂರ್ನಾಲ್ಕು ಬಾರಿ ಮಗ ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ ಎಂದು ತಾಯಿ ಬುದ್ದಿ ಮಾತು ಹೇಳಿದ್ದಾನೆ. ಆದರೂ ವಸಂತ ಮಗನನ್ನು ಪ್ರಚೋದಿಸಿದ್ದಳು ಎನ್ನಲಾಗುತ್ತಿದೆ.
ಊಟ, ಸೂರ್ಯನ ಬೆಳಕನ್ನೇ ಕಾಣದ ಕುಟುಂಬ
ಗಂಟ ಸಾವಿನ ಬೆನ್ನಲ್ಲೇ ಸಾಕಷ್ಟು ಮನನೊಂದಿದ್ದ ವಸಂತ, ಯಾರ ಬುದ್ದವಾದವನ್ನೂ ಕೇಳುತ್ತಿರಲಿಲ್ಲ. ಅದ್ರಲ್ಲೂ ವಸಂತ ಸೂಕ್ಷ ಸಂವೇದನೆಯ ಮಹಿಳೆ. ಇದೇ ಕಾರಣಕ್ಕೆ ಪತಿಯ ಸಾವಿನ ನಂತರದಲ್ಲಿ ಸಾಕಷ್ಟು ದಿನ ಊಟ ನಿದ್ರೆ ಬಿಟ್ಟಿದ್ದರು. ಅದೆಷ್ಟೋ ದಿನ ಸೂರ್ಯನ ಬೆಳಕನ್ನೇ ಕಾಣದೇ ಕುಟುಂಬ ದಿನ ಕಳೆದಿತ್ತು. ಮನೆಯಲ್ಲಿ ಸದಾ ದುಃಖದಲ್ಲಿಯೇ ದಿನವನ್ನು ಕಳೆಯುತ್ತಿದ್ದರು. ಯಾವುದೇ ಶುಭ ಸಮಾರಂಭಗಳಿಗೂ ತಾಯಿ ಮಕ್ಕಳು ಹೋಗುತ್ತಿರಲಿಲ್ಲ. ಪತಿಯ ಕುಟುಂಬದವರಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದರು. ಕೋವಿಡ್ ಸಂದರ್ಭದಲ್ಲಿ ತಮಗೆ ಯಾರೂ ಸಹಕಾರವನ್ನೇ ನೀಡಿಲ್ಲ ಅಂತಾ ತಮ್ಮ ಆಪ್ತರ ಬಳಿಯಲ್ಲಿ ಸಾಕಷ್ಟು ಬಾರಿ ಹೇಳಿಕೊಂಡಿದ್ದರು ಎನ್ನಲಾಗುತ್ತಿದೆ.
ಆತ್ಮಹತ್ಯೆಗೆ ಕಾರಣವಾಯ್ತಾ ಸಾಲದ ಹೊರೆ
ಸುಮಾರು ಇಪ್ಪತ್ತು ಲಕ್ಷಕ್ಕೂ ಅಧಿಕ ಸಾಲ ಮಾಡಿ ಮನೆ ಖರೀದಿ ಮಾಡಿದ್ದ ಕುಟುಂಬಕ್ಕೆ ಪತಿಯ ಸಾವು ಬರ ಸಿಡಿಲಿನಂತೆ ಆಘಾತವನ್ನು ಉಂಟು ಮಾಡಿತ್ತು. ಗಂಡನ ಸಾವಿನ ಬಳಿಕ ವಸಂತ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಮನೆಯ ಖರೀದಿಗೆ ಮಾಡಿದ್ದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇನ್ನು ಪತಿಯ ಸಾವಿನ ಬಳಿಕ ಯಾರ ಸಹಾಯವೂ ಸಿಗಿಲ್ಲ ಅನ್ನೋ ಕಾರಣಕ್ಕೆ ಆತ್ಮಹತ್ಯೆಗೆ ಇಡೀ ಕುಟುಂಬ ಶರಣಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಇನ್ನು ಮೊದಲು ತನ್ನ ಮಗನಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಸೂಚಿಸಿ ನಂತರ ಮಗಳನ್ನು ನೇಣಿನ ಕುಣಿಕೆಗೆ ಹಾಕಿರುವ ಸಾಧ್ಯತೆಯಿದೆ. ಮಕ್ಕಳಿಬ್ಬರೂ ಸಾವನ್ನಪ್ಪಿದ ಬಳಿಕ ಆಕೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ಒಂದೇ ಕುಟುಂಬದ ಐವರ ಸಾವು ಪ್ರಕರಣ : ಹಲ್ಲೆಗೆರೆ ಶಂಕರ್, ಅಳಿಯ ಶ್ರೀನಾಥ್ ಪೊಲೀಸ್ ವಶಕ್ಕೆ
ಸಾವಿಗೂ ಮುನ್ನ ಪತಿಯ ಪೋಟೋಗೆ ಪೂಜೆ
ಇನ್ನು ಸಾವಿಗೂ ಮುನ್ನ ವಸಂತ ವಿಚಿತ್ರ ವರ್ತನೆಯನ್ನು ತೋರಿದ್ದಾರೆ. ಮುಂಜಾನೆ ಮನೆಯ ಮೇಲ್ಬಾಗದ ತುಳಿಸಿ ಗಿಡವನ್ನು ಕಿತ್ತು ಹಾಕಿದ್ದರು. ಅಲ್ಲದೇ ಅಕ್ಕ ಪಕ್ಕದವರ ಜೊತೆಗೆ ಮಾತನಾಡಿಯೇ ಇರಲಿಲ್ಲವಂತೆ. ಮಧ್ಯಾಹ್ನ ಎರಡು ಗಂಟೆಯಿಂದಲೂ ಮನೆಯ ಬಾಗಿಲು ಹಾಕಿಕೊಂಡಿದ್ದರು. ಸಾವಿಗೂ ಮೊದಲು ತನ್ನ ಪತಿಯ ಪೋಟೋಗೆ ಮಕ್ಕಳೊಂದಿಗೆ ಪೂಜೆಯನ್ನು ಮಾಡಿದ್ದಾರೆ. ಇನ್ನು ತಿನ್ನಲು ತಂದಿದ್ದ ಬಿಸ್ಕೆಟ್ ಪ್ಯಾಕ್ ಕೂಡ ಒಡೆದಿರಲಿಲ್ಲ. ಬೆಳಗ್ಗೆಯಿಂದ ಯಾರ ಕರೆಯನ್ನೂ ಸ್ವೀಕರಿಸದ ವಸಂತ, ಒಮ್ಮೆ ಮಾತ್ರವೇ ತನ್ನ ತಮ್ಮನ ಜೊತೆಯಲ್ಲಿ ಮಾತನಾಡಿ, ಇನ್ಮೇಲೆ ಯಾರಿಗೂ ನಾವು ತೊಂದರೆ ಕೊಡುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಅಕ್ಕ ಪೋನ್ ರಿಸೀವ್ ಮಾಡದ ಹಿನ್ನೆಲೆಯಲ್ಲಿ ನಂದೀಶ್ ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ ಮನೆಗೆ ಬಂದು ನೋಡಿದ್ರೆ ಬಾಗಿಲು ಹಾಕಿರುವುದು ಕಂಡು ಬಂದಿತ್ತು. ಗಾಬರಿಗೊಂಡ ನಂದೀಶ್ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಮನೆಯ ಮೊದಲ ಮಗಡಿ ಏರಿಕ ಕಿಟಕಿ ಬಳಿ ನೋಡುತ್ತಿದ್ದಂತೆಯೇ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮೂರು ಪುಟಗಳ ಡೆತ್ ನೋಟ್ ಪತ್ತೆ
ತನ್ನಿಬ್ಬರು ಮಕ್ಕಳ ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವಸಂತ ಸುಮಾರು ಮೂರು ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದಾಳೆ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಪತಿಯ ಅನಾರೋಗ್ಯದ ಸಂಧರ್ಭದಲ್ಲಿ ನಮಗೆ ಯಾರೂ ಸ್ಪಂದಿಸಲಿಲ್ಲ, ಕೋವಿಡ್ ನಿಂತ ಪತಿ ಮೃತಪಟ್ಟುರೂ ನಮಗೆ ಯಾರೂ ನೆರವಾಗಲಿಲ್ಲ, ಮನೆ ಖರೀದಿಗೆ ಸಾಲ ಮಾಡಿದ್ದೇವೆ, ಈ ಮನೆ ಮಾರಾಟ ಮಾಡಿ ಅವರ ಸಾಲ ತೀರಿಸಿ. ಗಂಡನಿಲ್ಲದ ಬದುಕು ನಮಗೆ ಕಷ್ಟವಾಗುತ್ತಿದೆ. ನಾವು ಇನ್ಯಾರಿಗೂ ತೊಂದರೆ ಕೊಡುವುದಿಲ್ಲ. ನಮ್ಮವರೂ ಅಂತ ನಮಗ್ಯಾರೂ ಇಲ್ಲ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗುತ್ತಿದೆ.
( Another family suicide in Bangalore )