ಬೆಂಗಳೂರು : ಕೊರೊನಾ ವೈರಸ್ ಸೋಂಕು ಹರಡುತ್ತಿರೋ ನಡುವಲ್ಲೇ ರಾಜ್ಯದಲ್ಲಿ ರೈಲು ಸಂಚಾರ ಆರಂಭಗೊಂಡಿದೆ. ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರು ಕ್ವಾರಂಟೈನ್ ಸೀಲ್ ಸಿದ್ದರೂ ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದಾರೆ. ಇದರಿಂದಾಗಿ ಮೆಜಿಸ್ಟಿಕ್ ನಲ್ಲಿ ಪ್ರಯಾಣಿಕರಿಗೆ ಆತಂಕ ಶುರುವಾಗಿದೆ.

ತೆಲಂಗಾಣದಿಂದ ಹೊರಟಿದ್ದ ರೈಲು ಬೆಳಗ್ಗೆ ಬೆಂಗಳೂರಿಗೆ ತಲುಪಿದೆ. ತೆಲಂಗಾಣದಿಂದ ರಾಜ್ಯಕ್ಕೆ ಆಗಮಿಸಿದ್ದ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿ, ಕೈಗೆ ಕ್ವಾರಂಟೈನ್ ಸೀಲ್ ಹಾಕಲಾಗಿದೆ. ಹೊರ ರಾಜ್ಯಗಳ ಪ್ರಯಾಣಿಕರನ್ನು ಸೀಲ್ ಹಾಕಿ ಬಿಡುತ್ತಿರುವುದರಿಂದಾಗಿ ಪ್ರಯಾಣಿಕರು ಸೀದಾ ಬಿಎಂಟಿಸಿ ಹಾಗೂ ಕೆಎಸ್ಆರ್ ಟಿಸಿ ಬಸ್ಸುಗಳಲ್ಲಿ ಪ್ರಯಾಣಿಸುವುದಕ್ಕೆ ಮುಂದಾಗುತ್ತಿದ್ದಾರೆ. ಇದರಿಂದಾಗಿ ಇತರ ಪ್ರಯಾಣಿಕರಿಗೆ ಭಯ ಶುರುವಾಗಿದೆ.

ಪ್ರಯಾಣಿಕರು ಮೆಜಿಸ್ಟಿಕ್ ಬಸ್ ನಿಲ್ದಾಣದಲ್ಲಿ ಅಡ್ಡಾದಿಡ್ಡಿಯಾಗಿ ತಿರುಗಾಡುತ್ತಿದ್ದಾರೆ. ಕೈ ಮೇಲೆ ಕ್ವಾರಂಟೈನ್ ಸೀಲ್ ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ. ಹೀಗೆ ತೆಲಂಗಾಣದಿಂದ ಬಂದು ಮೆಜಿಸ್ಟಿಕ್ ಬಸ್ ನಿಲ್ದಾಣದಲ್ಲಿದ್ದ ದಂಪತಿಯನ್ನು ಪೊಲೀಸರು ಕ್ವಾರಂಟೈನ್ ಗೆ ಒಳಪಡಿಸಿದ್ದಾರೆ.

ಹೊರ ರಾಜ್ಯಗಳಿಂದ ಬಂದವರು ಹೀಗೆ ರಾಜಾರೋಷವಾಗಿ ಓಡಾಡುತ್ತಿರುವುದರಿಂದಾಗಿ ಕೊರೊನಾ ಆತಂಕ ಶುರುವಾಗಿದೆ. ಹೊರ ರಾಜ್ಯಗಳಿಂದ ಬಂದವರನ್ನು ಕಡ್ಡಾಯವಾಗಿ ಸರಕಾರವೇ ಕ್ವಾರಂಟೈನ್ ಗೆ ಒಳಪಡಿಸಬೇಕಿದೆ. ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ಬಸ್ ನಿಲ್ದಾಣಗಳು ಕೂಡ ಸೇಫ್ ಅಲ್ಲಾ ಅನ್ನುವುದು ಇದೀಗ ದೃಢಪಟ್ಟಿದೆ.