ಬಿಗ್ ಬಾಸ್ ಸ್ಪರ್ಧಿ, ನಟಿ ಚೈತ್ರಾ ಕೊಟೂರು ಪ್ರೀತಿಸಿ ಮದುವೆಯಾಗಿದ್ದು, ಮದುವೆಯಾಗಿ 24 ಗಂಟೆ ಕಳೆಯೋ ಮೊದಲೆ ಮದುವೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಚೈತ್ರಾ ಬೆದರಿಸಿ ನಮ್ಮ ಮಗನಿಂದ ತಾಳಿ ಕಟ್ಟಿಸಿಕೊಂಡಿದ್ದಾಳೆ ಎಂದು ಚೈತ್ರಾ ಗಂಡನ ಮನೆಯವರು ಆರೋಪಿಸಿದ್ದಾರೆ.

ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೊಟೂರು ರವಿವಾರ ಬೆಂಗಳೂರಿನ ದೇವಾಲಯವೊಂದರಲ್ಲಿ ತಾವು ಒಂದು ವರ್ಷದಿಂದ ಪ್ರೀತಿಸುತ್ತಿದ್ದ ನಾಗಾರ್ಜುನ್ ಜೊತೆ ಹೊಸ ಬದುಕಿಗೆ ಕಾಲಿಟ್ಟು ಸಪ್ತಪದಿ ತುಳಿದಿದ್ದರು. ಆದರೆ ಚೈತ್ರಾ, ನಾಗಾರ್ಜುನ್ ರನ್ನು ಬಲವಂತವಾಗಿ ಮದುವೆಯಾಗಿದ್ದಾರೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ನಮ್ಮ ಮಗನಿಗೆ ಈ ಮದುವೆ ಇಷ್ಟವಿಲ್ಲ. ಚೈತ್ರಾ ಬಲವಂತವಾಗಿ ಸಂಘಟನೆಗಳನ್ನು ತೋರಿಸಿ ಹೆದರಿಸಿ ನಮ್ಮ ಮಗನಿಂದ ತಾಳಿ ಕಟ್ಟಿಸಿಕೊಂಡಿದ್ದಾಳೆ ಎಂದು ನಾಗಾರ್ಜುನ್ ಹೆತ್ತವರು ಆರೋಪಿಸಿದ್ದಾರೆ. ಈ ಎಲ್ಲ ಆರೋಪಗಳ ಬಗ್ಗೆ ಚೈತ್ರಾ ಸ್ಪಷ್ಟನೆ ನೀಡಿದ್ದು, ನಾಗಾರ್ಜುನ್ ನನ್ನನ್ನು ಪ್ರೀತಿಸಿದ್ದಾರೆ. ಅದಕ್ಕೆ ನಾವು ಮದುವೆಯಾಗಿದ್ದೇವೆ ಎಂದಿದ್ದಾರೆ.

ನಾನು ಮತ್ತು ನಾಗಾರ್ಜುನ್ ಒಂದು ವರ್ಷದಿಂದ ಪ್ರೀತಿಸುತ್ತಿದ್ದೇವು. ಆದರೆ ನಾಗಾರ್ಜುನ್ ಮನೆಯವರಿಗೆ ನನ್ನನ್ನು ನಾಗಾರ್ಜುನ್ ಮದುವೆಯಾಗೋದು ಇಷ್ಟವಿರಲಿಲ್ಲ. ಹೀಗಾಗಿ ಅವರು ನಾಗಾರ್ಜುನ್ ಗೆ ಬ್ಲ್ಯಾಕ್ ಮೇಲ್ ಮಾಡಿ ನನ್ನಿಂದ ದೂರ ಮಾಡುವ ಪ್ರಯತ್ನ ಮಾಡಿದ್ದರು.

ನಾಗಾರ್ಜುನ್ ಕೂಡ ಒಮ್ಮೊಮ್ಮೆ ಪೋಷಕರ ಒತ್ತಾಯಕ್ಕೆ ಮಣಿದು ನನ್ನಿಂದ ದೂರವಾಗಲು ಪ್ರಯತ್ನಿಸುತ್ತಿದ್ದ. ಹೀಗಾಗಿ ನಾನು ಅವನನ್ನು ಕರೆದೊಯ್ದು ಸಂಘಟನೆಯ ನೆರವಿನಿಂದ ಮದುವೆಯಾಗಿದ್ದೇನೆ. ಅವನ ಹೆಂಡತಿಯಾಗೇ ಬಾಳುತ್ತೇನೆ ಎಂದಿದ್ದಾರೆ. ಆದರೆ ಮದುವೆ ಬಳಿಕ ನಾಗಾರ್ಜುನ್ ಹೆತ್ತವರು ಮಾತುಕತೆಗಾಗಿ ನಮ್ಮನ್ನು ಕೋಲಾರಕ್ಕೆ ಕರೆದೊಯ್ದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಕೋಲಾರಕ್ಕೆ ಹೋಗಿ ಮಾತುಕತೆಯಲ್ಲಿ ಬಗೆಹರಿಸಿಕೊಳ್ಳುವ ನಿರ್ಣಯವಾಗಿತ್ತು.ಆದರೆ ನಾಗಾರ್ಜುನ್ ಹೆತ್ತವರು ಹಾಗೂ ಸಹೋದರಿ ನನ್ನ ಕುಟುಂಬಸ್ಥರ ಮೇಲೆ ಹಲ್ಲೆಗೆ ಯತ್ನಿಸಿದ್ದು, ತಳ್ಳಾಡಿ, ನಾನು ಸಿನಿಮಾದವಳೆಂದು ನಿಂದಿಸಿ ಹಿಂಸೆ ನೀಡುತ್ತಿದ್ದಾರೆ. ನನಗೆ ಪೊಲೀಸ್ ಸಹಾಯದ ಅವಶ್ಯಕತೆ ಇದೆ ಎಂದಿದ್ದಾರೆ.

ನಾಗಾರ್ಜುನ್ ಗೆ ಮೋಸ ಮಾಡಿ, ಬಲವಂತದಿಂದ ಮದುವೆಯಾಗಲು ಅವನು ಚಿಕ್ಕ ಮಗುವಲ್ಲ. ಹೀಗಾಗಿ ವಿನಾಕಾರಣ ಆತನ ಕುಟುಂಬಸ್ಥರು ನನಗೆ ತೊಂದರೆ ಕೊಡುತ್ತಿದ್ದಾರೆ ಎಂದು ಚೈತ್ರಾ ಆರೋಪಿಸಿದ್ದಾರೆ.