ಬೆಂಗಳೂರು : ಬಿಬಿಎಂಪಿ ಚುನಾವಣೆ ನಡೆಸುವಂತೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. 10 ವಾರಗಳ ಒಳಗಾಗಿ ಚುನಾವಣೆಯನ್ನು ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಬಿಬಿಎಂಪಿಗೆ ಶೀಘ್ರ ಚುನಾವಣೆ ನಡೆಸಬೇಕೆಂದು ಕೋರಿ ಕಾಂಗ್ರೆಸ್ ಸದಸ್ಯ ಎಂ.ಶಿವರಾಜ್, ಅಬ್ದುಲ್ ವಾಜಿದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ 2020ರ ಜೂನ್ ತಿಂಗಳಿನಲ್ಲಿ ಸರ್ಕಾರ ಹೊರಡಿಸಿದ ವಾರ್ಡ್ ಪುನರ್ ವಿಂಗಡಣೆ ಯಂತೆಯೇ ಚುನಾವಣೆ ನಡೆಸಬೇಕೆಂದು ಹೈಕೋರ್ಟ್ ಆದೇಶ ನೀಡಿದೆ.
ಕಳೆದ ಜೂನ್‍ನಲ್ಲಿ ಸರ್ಕಾರ ಹೊರಡಿಸಿರುವ ಅಸೂಚನೆಯಂತೆ 198 ವಾರ್ಡ್‍ಗಳಿಗೆ ಚುನಾವಣೆಯನ್ನು ನಡೆಸಲು ಒಂದು ತಿಂಗಳೊಳಗೆ ಮೀಸಲಾತಿ ಅಸೂಚನೆ ಹೊರಡಿಸಬೇಕು. ನಂತರ ಆರು ವಾರದೊಳಗೆ ಚುನಾವಣೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಒ.ಎಸ್. ಓಕಾ, ನ್ಯಾ.ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ನ್ಯಾಯಾಲಯದ ಮುಂದೆ ಸರ್ಕಾರ ವಾರ್ಡ್ ಹೆಚ್ಚಳ ಮಾಡಿ ಕೆಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲಾಗುತ್ತಿದೆ. ಅದಕ್ಕಾಗಿ ಕಾಲಾವಕಾಶ ಬೇಕಾಗುತ್ತದೆ ಎಂದು ತನ್ನ ವಾದ ಮಂಡಿಸಿತ್ತು. ಚುನಾವಣಾ ಆಯೋಗ 198 ವಾರ್ಡ್‍ಗಳಿಗೆ ಚುನಾವಣೆ ನಡೆಸಲು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 2020ರ ಜೂನ್ ತಿಂಗಳಲ್ಲಿ ಸರ್ಕಾರ ವಾರ್ಡ್‍ಗಳ ಪುನರ್ ವಿಂಗಡಣೆ ಮಾಡಿದೆ. ಅದರ ಅನ್ವಯ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ 3 ಕೋಟಿ ವೆಚ್ಚ ಮಾಡಲಾಗಿದೆ ಎಂದು ಚುನಾವಣಾ ಆಯೋಗ ವಾದ ಮಂಡಿಸಿತ್ತು.
ಅರ್ಜಿದಾರರ ಪರ ವಕೀಲರು ಸರ್ಕಾರ ಉದ್ದೇಶಪೂರ್ವಕವಾಗಿಯೇ ಚುನಾವಣೆಯನ್ನು ಮುಂದೂಡಲು ತಂತ್ರ ರೂಪಿಸಿದೆ ಎಂಬ ಆಕ್ಷೇಪ ವ್ಯಕ್ತಪಡಿಸಿದ್ದರು. ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯ ಕಾಯ್ದಿರಿಸಿದ್ದ ತೀರ್ಪನ್ನು ಇಂದು ಪ್ರಕಟಿಸಿದ್ದು , ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಆದೇಶಿಸಿದ್ದು, ಒಂದು ತಿಂಗಳೊಳಗೆ ಅಸೂಚನೆ ಹೊರಡಿಸಿದ ನಂತರದ ಒಂದೂವರೆ ತಿಂಗಳೊಳಗೆ ಚುನಾವಣೆ ದಿನಾಂಕ ಪ್ರಕಟಿಸಲು ಆಯೋಗಕ್ಕೆ ನಿರ್ದೇಶನ ನೀಡಿದೆ.