ಬೆಂಗಳೂರು : ಒಂದೆಡೆ ಬಿಜೆಪಿ ಕೊನೆಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾಯಕನನ್ನು ಆಯ್ಕೆಮಾಡಿದ ಸಂಭ್ರಮದಲ್ಲಿದ್ದರೇ, ಇತ್ತ ಬಿಬಿಎಂಪಿ (BBMP) ಆಡಳಿತದ ಮೇಲೆ ಕಣ್ಣಿಟ್ಟಿರೋ ಕಾಂಗ್ರೆಸ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ (DK Sivakumar), ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಹಗರಣಗಳ ತನಿಖಾ ವರದಿ ಪಡೆಯುವ ಮೂಲಕ ಬಿಜೆಪಿ ಗೆ ಶಾಕ್ ನೀಡಿದ್ದಾರೆ.
2019 ರಿಂದ 2023 ರವರೆಗಿನ ಅವಧಿಯಲ್ಲಿ ಬಿಬಿಎಂಪಿಯಲ್ಲಿ ನಡೆದ ಕಾಮಗಾರಿಗಳಲ್ಲಿ ಅಪಾರ ಪ್ರಮಾಣದ ಅವ್ಯವಹಾರ ನಡೆದ ಆರೋಪ ಕೇಳಿಬಂದಿತ್ತು. ಹೀಗಾಗಿ ಅಧಿಕಾರ ದಲ್ಲಿರೋ ಕಾಂಗ್ರೆಸ್ ಎಲ್ಲ ಕಾಮಗಾರಿಗಳ ಬಗ್ಗೆ ತನಿಖೆಗೆ ಬೆಂಗಳೂರು ಪ್ರಾದೇಶಿಕ ಆಯುಕ್ತ ಆದಿತ್ಯಾ ಬಿಸ್ವಾಸ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತ್ತು. ಇದೀಗ ತನಿಖೆಯ ಬಳಿಕ ಆದಿತ್ಯಾ ಬಿಸ್ವಾಸ್ ನೇತೃತ್ವದ SIT ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಈ ವರದಿಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿಯಲ್ಲಿ ನಡೆದ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಸಂಗತಿಯನ್ನು ವರದಿ ಪುಷ್ಠಿಕರಿಸಿದೆ.
ಇದನ್ನೂ ಓದಿ: ಬಿಜೆಪಿಗೆ ಅನಿವಾರ್ಯವಾದ್ರಾ ಬಿವೈ ವಿಜಯೇಂದ್ರ ! ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ BJP ಹೈಕಮಾಂಡ್

SIT ವರದಿ ಪ್ರಕಾರ, ಬಿಜೆಪಿಯ ಅವಧಿಯಲ್ಲಿ ಪಾಲಿಕೆಯಲ್ಲಿ ಒಂದು ಸಾವಿರ ಕೋಟಿಗೂ ಅಧಿಕ ಮೊತ್ತದ ಅವ್ಯವಹಾರದ ಉಲ್ಲೇಖವಾಗಿದೆ. ಕಾಮಗಾರಿಗಳ ದಾಖಲಾತಿ ,ಟೆಂಡರ್ ಪ್ರೊಸೆಸ್,ಜಾಬ್ ಕೋಡ್ ,ಬಿಲ್ ಬಿಡುಗಡೆ ಸೇರಿದಂತೆ ಹಲವು ವಿಚಾರಗಳಲ್ಲಿ ಗೋಲ್ಮಾಲ್ ನಡೆದಿರೋ ಶಂಕೆ ವ್ಯಕ್ತವಾಗಿದೆ. ಕಳೆದ ಎರಡು ತಿಂಗಳಿನಿಂದ ಆದಿತ್ಯ ಬಿಸ್ವಾಸ್ ನೇತೃತ್ವದ ಸಮಿತಿ ತನಿಖೆ ನಡೆಸಿತ್ತು. ಈ ತನಿಖೆ ವೇಳೆ ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮಾಡಿ ಕಾಮಗಾರಿ ನಡೆಸಿರೋದು ಬೆಳಕಿಗೆ ಬಂದಿದೆ.
ಗುಣಮಟ್ಟದ ಕಾಮಗಾರಿ ಮಾಡಿಲ್ಲ. ಅಲ್ಲದೇ ಕೆಲ ಕಾಮಗಾರಿಗಳನ್ನು ಮಾಡದೇ ಕೇವಲ ಬಿಲ್ ಮಂಜೂರಾತಿ ಪಡೆಯಲಾಗಿದೆ. ಇನ್ನು ಕೆಲವು ಕಾಮಗಾರಿಗೆ ಅಗತ್ಯಕ್ಕಿಂತ ಹೆಚ್ಚಿನ ಹಣ ಕೋಟ್ ಮಾಡಲಾಗಿದೆ. ಹೀಗೆ ಪ್ರಾಥಮಿಕ ಹಂತದ ತನಿಖೆಯಲ್ಲೇ ಸಾವಿರಾರು ಕೋಟಿ ರೂಪಾಯಿ ಅಕ್ರಮದ ಆರೋಪ ಕೇಳಿಬಂದಿದೆ. ಈ ಬಗ್ಗೆ ಆದಿತ್ಯ ಬಿಸ್ವಾಸ್ ನೇತೃತ್ವದ ಸಮಿತಿ ಸರ್ಕಾರಕ್ಕೆ ತನಿಖಾ ವರದಿ ಕೂಡ ಸಲ್ಲಿಸಿದೆ.

ಇನ್ನೂ ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ತನಿಖೆಗಾಗಿ ಬಿಬಿಎಂಪಿಯ ಹಲವು ಅಧಿಕಾರಿಗಳಿಗೆ ನೊಟೀಸ್ ಕೂಡ ಜಾರಿಮಾಡಿದೆ. ಇನ್ನೂ ಬಿಜೆಪಿ ಅವಧಿಯಲ್ಲಿ ನಡೆದಿರೋ ಈ ಹಗರಣಗಳನ್ನು ಮತ ಬ್ಯಾಂಕ್ ಗಾಗಿ ಬಳಸಿಕೊಳ್ಳಲು ಸಜ್ಜಾಗಿರುವ ಕಾಂಗ್ರೆಸ್ ಬಿಬಿಎಂಪಿ ಚುನಾವಣೆಗೆ ಬಿಬಿಎಂಪಿಯ ಬಿಜೆಪಿ ಹಗರಣ ಪ್ರಸ್ತಾಪಿಸಲು ಸನ್ನದ್ಧವಾಗಿದೆ.
ಮಾತ್ರವಲ್ಲ ಈ ವರದಿ ಆಧರಿಸಿ ತನಿಖೆ ಮುಂದುವರೆಸಲು ಸೂಚಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಈ ಹಗರಣಗಳ ತನಿಖೆಯನ್ನು ವಾರ್ಡ್ ವಾರು ನಡೆಸಿ, ನಡೆದ ಕಾಮಗಾರಿ, ಪಡೆಯಲಾದ ಹಣ, ಗುತ್ತಿಗೆದಾರರು,ಟೆಂಡರ್ ಪ್ರಕ್ರಿಯೆ ಸೇರಿದಂತೆ ಎಲ್ಲಾ ವಿಚಾರಗಳ ಕುರಿತು ಕೂಲಂಕುಶ ತನಿಖೆಗೆ ಸೂಚಿಸಿದ್ದಾರೆ ಎನ್ನಲಾಗ್ತಿದೆ. ಸದ್ಯ ಅಧಿಕಾರಿಗಳಿಂದಲೇ ನಡೆಯುತ್ತಿರೋ ಬಿಬಿಎಂಪಿಗೆ ಚುನಾವಣೆ ನಡೆಯಬೇಕಿದೆ.
ಸದ್ಯ ಕೆಲ ವರ್ಷಗಳಿಂದ ಬಿಬಿಎಂಪಿ ಕಾರ್ಪೋರೇಟರ್ ಗಳಿಲ್ಲದೇ ಕೇವಲ ಅಧಿಕಾರಿಗಳಿಂದಲೇ ನಡೆಯುತ್ತಿದೆ. ಹೀಗಾಗಿ ಬಿಜೆಪಿ ಸರ್ಕಾರ ಮುಂಬರುವ ಚುನಾವಣೆ ಹಾಗೂ ಅಧಿಕಾರದ ಆಸೆಯಿಂದ ಬಿಬಿಎಂಪಿ ಅನುದಾನ ಹಂಚಿಕೆ, ಕಾಮಗಾರಿ ಹಾಗೂ ಟೆಂಡರ್‌ಗಳಲ್ಲಿ ಗೋಲ್‌ಮಾಲ್ ಮಾಡಿದೆ ಎಂಬ ಆರೋಪಕೇಳಿಬಂದಿತ್ತು.
ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿ ವಿರುದ್ಧ ತನಿಖಾಸ್ರ್ರ ಬಳಸಿದ ಕಾಂಗ್ರೆಸ್ ಈಗ ಬಿಬಿಎಂಪಿ ಚುನಾವಣೆ ಹೊತ್ತಿನಲ್ಲಿ ಅಕ್ರಮಗಳನ್ನ ಬಯಲಿಗೆಳೆಯೋ ಮೂಲಕ ರಾಜ್ಯ ಬಿಜೆಪಿಗೆ ಮುಜುಗರ ತರಲು ಮುಂದಾಗಿದೆ. ಒಂದೊಮ್ಮೆ ಬಿಜೆಪಿ ಶಾಸಕರಿರೋ ವಾರ್ಡ್ ಗಳ ಅಕ್ರಮ ಸಾಬೀತಾದರೇ ಬಿಬಿಎಂಪಿ ಚುನಾವಣೆಯಲ್ಲಿ ಕಮಲ ಪಾಳಯಕ್ಕೆ ತೀವ್ರ ಹಿನ್ನಡೆಯಾಗೋದಂತು ಸತ್ಯ