ಬೆಳಗಾವಿ09: ಶವದ ಜೊತೆ ಏನಿರುತ್ತೆ? ಏನು ಇರಲ್ಲ ಅಂತಿರಾ, ಆದರೆ ಇಲ್ಲೊಂದು ಶವ ಮಾತ್ರ ಬರೋಬ್ಬರಿ 1.5 ಕೆಜಿ ಚಿನ್ನದ ಜೊತೆ ನದಿಯಲ್ಲಿ ತೇಲಿ ಬಂದಿದೆ. ಇಂತಹದೊಂದು ಘಟನೆ ಕಂಡ ಗ್ರಾಮಸ್ಥರು ಕಂಗಾಲಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅವರಕೋಡ ಮೂಲಕ ಹಾದು ಹೋಗೋ ಕೃಷ್ಣಾ ನದಿಯಲ್ಲಿ ಅಕ್ಟೋಬರ್ 4 ರಂದು ಹೆಣವೊಂದು ತೇಲಿಬಂದಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಹೆಣ ಸಿಕ್ಕಿರೋ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಹೆಣದ ಪರಿಶೀಲನೆ ನಡೆಸಿದ ಪೊಲೀಸರಿಗೆ ಅಚ್ಚರಿಯೊಂದು ಎದುರಾಗಿದ್ದು, ಶವದ ಜೊತೆ 1.5 ಕೆಜಿ ತೂಕದ ಚಿನ್ನದ ಗಟ್ಟಿಯೊಂದು ಪತ್ತೆಯಾಗಿದೆ.
ಅಷ್ಟೇ ಅಲ್ಲ ಹೆಣದ ಮೈ ಮೇಲೆ ಗಾಯವಾಗಿದ್ದು, ಹಣ-ಚಿನ್ನಕ್ಕಾಗಿ ನಡೆದ ಹತ್ಯೆಯಾಗಿರಬಹುದೆಂದು ಶಂಕಿಸಲಾಗಿದೆ. ಪತ್ತೆಯಾದ ಮೃತದೇಹವನ್ನು ಮಹಾರಾಷ್ಟ್ರದ ಮಿರಜ್ ತಾಲೂಕಿನ ಪಾಟಗಾಂವ್ ಮೂಲದ ಸಾಗರ್ ಪಾಟೀಲ್ ಎಂದು ಗುರುತಿಸಲಾಗಿದೆ.
ಸಾಗರ್ ಪಾಟೀಲ್ ಸಾವಿನ ಸುದ್ದಿಯನ್ನು ಕುಟುಂಬಸ್ಥರಿಗೆ ತಿಳಿಸಿ ಶವವನ್ನು ಹಸ್ತಾಂತರಿಸಲಾಗಿದ್ದು, ಚಿನ್ನದ ಗಟ್ಟಿ ಹಾಗೂ ಸಾಗರ್ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ಅಥಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.