ಮಂಗಳೂರು: ಕೇರಳ ಸೇರಿದಂತೆ ಹಲವೆಡೆ ಆತಂಕ ಮೂಡಿಸಿರುವ ಹಕ್ಕಿ ಜ್ವರ ಕರ್ನಾಟಕಕ್ಕೂ ಕಾಲಿಟ್ಟಿದ್ದು ಭೀತಿ ಸೃಷ್ಟಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಕಾಗೆಗಳು ಸಾವನ್ನಪ್ಪಿದ್ದು ರೋಗಶಂಕೆ ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಸತ್ತ ಕಾಗೆಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

ಈ ಬಗ್ಗೆ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಸರೆನ್ಸ್ ಮೂಲಕ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಇದುವರೆಗೂ ರಾಜ್ಯದಲ್ಲಿ ಬರ್ಡ್ ಫ್ಲೂ ಪ್ರಕರಣ ಕಂಡುಬಂದಿಲ್ಲ.

ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಗೆ ಸಾವಾಗಿರುವ ಮಾಹಿತಿ ಬಂದಿದೆ. ಅವುಗಳನ್ನು ಪರೀಕ್ಷೆಗೆ ಕಳುಹಿಸಿ ವರದಿಗೆ ಕಾಯುತ್ತಿದ್ದೇವೆ. ಕೆಲವೇ ಗಂಟೆಯಲ್ಲಿ ವರದಿ ಬರುವ ನೀರಿಕ್ಷೆ ಇದೆ. ಬಂದ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ ಎಂದಿದ್ದಾರೆ.

ಕೇರಳದ ಗಡಿಯಲ್ಲಿ ನಮ್ಮ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿದ್ದು, ಕಾಗೆ ಸ್ಯಾಂಪಲ್ ವರದಿ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

ಮಾಂಸಹಾರಿಗಳು ಎಚ್ಚರವಾಗಿರಬೇಕು ಮತ್ತು ಮಾಂಸವನ್ನು ಹೆಚ್ಚು ಬೇಯಿಸಿ ತಿನ್ನಬೇಕು ಎಂದು ಸುಧಾಕರ್ ಮನವಿ ಮಾಡಿದ್ದಾರೆ.