ಮಗಳಿಗಲ್ಲ ಪತ್ನಿಗೆ ಒಲಿಯಿತು ಟಿಕೇಟ್….! ಕೊನೆಗೂ ಕುಟುಂಬ ರಾಜಕಾರಣಕ್ಕೆ ಶರಣಾದ ಬಿಜೆಪಿ…!!

ಚುನಾವಣೆ ಭಾಷಣ ಸೇರಿದಂತೆ ಹಲವೆಡೆ ಕಾಂಗ್ರೆಸ್ ವಿರುದ್ಧ ಪುಖಾಂನುಪುಂಖವಾಗಿ ಕುಟುಂಬ ರಾಜಕಾರಣದ ಆರೋಪ ಮಾಡುವ ಬಿಜೆಪಿ ಕೂಡ ಅದೇ ಫ್ಯಾಮಿಲಿ ಪೊಲಿಟಿಕ್ಸ್ ಗೆ ಜೈ ಎಂದಿದ್ದು, ಕೇಂದ್ರ ಸಚಿವ ದಿ.ಸುರೇಶ್ ಅಂಗಡಿ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಪತ್ನಿಗೆ ಟಿಕೇಟ್ ನೀಡುವ ಮೂಲಕ ಕುಟುಂಬ ರಾಜಕಾರಣಕ್ಕೆ ಅಡ್ಡ ಬಿದ್ದಿದೆ.

ದಿ.ಸುರೇಶ್ ಅಂಗಡಿಯವರ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಚುನಾವಣೆಗೆ ಪ್ರಭಲ ಆಕಾಂಕ್ಷಿಗಳ ಪಟ್ಟಿಯೇ ಇದ್ದರೂ ಬಿಜೆಪಿ ಹೈಕಮಾಂಡ್ ಟಿಕೇಟ್ ಅಂಗಡಿ ಕುಟುಂಬದ ಹೊಸ್ತಿಲು ದಾಟದಂತೆ ನೋಡಿಕೊಂಡಿದೆ. ಅಂಗಡಿಯವರ ಪುತ್ರಿ ಹಾಗೂ ಸಚಿವ ಶೆಟ್ಟರ್ ಸೊಸೆ ಶೃದ್ಧಾ ಶೆಟ್ಟರ್ ಗೆ ಟಿಕೇಟ್ ಎಂದು ಬಿಂಬಿಸಲಾಗಿತ್ತಾದರೂ ಕೊನೆ ಕ್ಷಣದಲ್ಲಿ ಚಾಕಚಕ್ಯತೆ ತೋರಿದ ಹೈಕಮಾಂಡ್ ಅಂಗಡಿಯವರ ಪತ್ನಿ ಮಂಗಳಾಗೆ ಟಿಕೇಟ್ ಘೋಷಿಸಿದೆ.

ಸುರೇಶ್ ಅಂಗಡಿಯವರ ಪತ್ನಿ ಮಂಗಳಾ ಅಂಗಡಿ ಹೈಕಮಾಂಡ್ ಆದೇಶದಂತೆ ಲೋಕಸಭೆ ಕಣಕ್ಕಿಳಿಯಲಿದ್ದು, ರಾಜ್ಯ ಬಿಜೆಪಿ ಮಂಗಳಾ ಗೆಲುವಿಗೆ ಸರ್ಕಸ್ ಆರಂಭಿಸಿದೆ. ಮೂಲಗಳ ಮಾಹಿತಿ ಪ್ರಕಾರ ಸುರೇಶ್ ಅಂಗಡಿಯವರ ಕುಟುಂಬಕ್ಕೆ ಟಿಕೇಟ್ ನೀಡದೇ  ಇದ್ದಲ್ಲಿ ಸ್ಥಳೀಯ ಕಾರ್ಯಕರ್ತರ ವಿರೋಧ ಎದುರಿಸಬೇಕಾಗುತ್ತದೆ ಎಂದ ರಾಜ್ಯ ಬಿಜೆಪಿ ಮನವೊಲಿಕೆಗೆ ಹೈಕಮಾಂಡ್ ಮಣಿದು ಟಿಕೇಟ್ ನೀಡಿದೆ ಎನ್ನಲಾಗುತ್ತಿದೆ.

ಇನ್ನು ಬಿಜೆಪಿ ಹೈಕಮಾಂಡ್ ಟಿಕೇಟ್ ನೀಡುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದಿ.ಸುರೇಶ್ ಅಂಗಡಿ ಪತ್ನಿ,  ಮಂಗಳಾ ಅಂಗಡಿ ಸುರೇಶ್ ಅಂಗಡಿಯವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿರಿಸಿಕೊಂಡು ನನಗೆ ಟಿಕೇಟ್ ನೀಡಲಾಗಿದೆ. ಅವರ ಅನುಪಸ್ಥಿತಿಯಲ್ಲಿ ರಾಜಕಾರಣಕ್ಕೆ ಬಂದಿರೋದು ಹಾಗೂ ಅವರ ಸ್ಥಾನಕ್ಕೆ ನಾನು ಸ್ಪರ್ಧಿಸುತ್ತಿರೋದು ನಿಜಕ್ಕೂ ದುಃಖದಾಯಕ ವಿಚಾರ. ಆದರೆ  ಅವರ  ಹಾದಿಯಲ್ಲೇ ನಡೆದು, ಅಭಿವೃದ್ಧಿ ಕಾರ್ಯಗಳನ್ನು ಮುನ್ನಡೆಸಿಕೊಂಡು ಹೋಗುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ ಎಂದಿದ್ದಾರೆ.

ಆದರೆ ಬಿಜೆಪಿ ಹೈಕಮಾಂಡ್ ನಡೆಗೆ ರಾಜ್ಯ ಬಿಜೆಪಿಯಲ್ಲಿ ತೀವ್ರ ಅಸಮಧಾನವಾಗಿದ್ದು, ಒಂದೆಡೆ ಕುಟುಂಬ ರಾಜಕಾರಣ ಬೇಡ ಎನ್ನುವ ಹೈಕಮಾಂಡ್ ಇನ್ನೊಂದೆಡೆ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ  ಕುಟುಂಬದ ಸದಸ್ಯರಿಗೆ ಅವಕಾಶ ಕಲ್ಪಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವವಾಗಿದೆ.

ಇನ್ನೊಂದೆಡೆ ಟಿಕೇಟ್ ಕೈತಪ್ಪಿದ್ದಕ್ಕೆ  ಹಿಂದೂಪರ ಹೋರಾಟಗಾರ ಪ್ರಮೋದ್ ಮುತಾಲಿಕ್ ಕೂಡ ಗರಂ ಆಗಿದ್ದು, ಹೋರಾಟಗಳಿಗೆ ನಾವು ಬೇಕು. ರಾಜಕೀಯ ಅವಕಾಶದ ವಿಚಾರ ಬಂದಾಗ ಬಿಜೆಪಿ ನಮ್ಮನ್ನು ನಿರ್ಲಕ್ಷಿಸುತ್ತದೆ ಎಂದು ಅಸಮಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.  

Comments are closed.