ಮಂಗಳೂರು : ಮೀನುಗಾರಿಕೆಗೆ ತೆರಳಿದ್ದ ವೇಳೆಯಲ್ಲಿ ಪರ್ಸಿನ್ ಬೋಟ್‌ವೊಂದು ದುರಂತಕ್ಕೀಡಾಗಿದೆ. ಬೋಟ್ ಮಗುಚಿ ಬಿದ್ದಿದ್ದರಿಂದಾಗಿ ಬೋಟಿನಲ್ಲಿದ್ದ 6 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ. ಅಲ್ಲದೇ 19 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಸೋಮವಾರ ಬೆಳಗ್ಗೆ ಆಳಸಮುದ್ರ ಮೀನುಗಾರಿಕೆಗೆ ಪ್ರಶಾಂತ್ ಕುಳಾಯಿ ಮಾಲೀಕತ್ವದ ಶ್ರೀ ರಕ್ಷಾ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ನಡೆಸಿ ರಾತ್ರಿ ವೇಳೆ ದಕ್ಕೆಗೆ ಮರಳುತ್ತಿರುವ ಸುಮಾರು 10 ನಾಟಿಕಲ್ ದೂರದಲ್ಲಿ ಬೋಟ್ ಅಡಿಭಾಗಕ್ಕೆ ಢಿಕ್ಕಿ ಹೊಡೆದಿದೆ, ಅಲ್ಲದೇ ಗಾಳಿಯ ಬಿರುಸಿಗೆ ಬೋಟ್ ಮಗುಚಿ ಬಿದ್ದಿದೆ. ನಾಪತ್ತೆಯಾದ ಮೀನುಗಾರರು ಮಂಗಳೂರಿನ ಕಸಬಾ ಹಾಗೂ ಬೆಂಗರೆ ನಿವಾಸಿಗಳು ಎಂದು ತಿಳಿದುಬಂದಿದೆ.
ದುರ್ಘಟನೆ ಸಂಭವಿಸುತ್ತಿದ್ದಂತೆಯೇ ಸಣ್ಣ ದೋಣಿ ಹಾಗೂ ಇತರ ಬೋಟುಗಳ ಸಹಾಯದಿಂದ ಬೋಟಿನಲ್ಲಿದ್ದ 19 ಮಂದಿ ಮೀನುಗಾರ ರನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ನಾಪತ್ತೆಯಾಗಿರುವ ಮೀನುಗಾರರಿಗಾಗಿ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ. ಕರಾವಳಿ ರಕ್ಷಣಾ ಪಡೆ ಈಗಾಗಲೇ ಶೋಧ ಕಾರ್ಯವನ್ನು ಆರಂಭಿಸಿದೆ.
ನಿನ್ನೆ ರಾತ್ರಿಯೇ ಬೋಟು ವಾಪಾಸ್ ಬರಬೇಕಾಗಿತ್ತು. ಆದರೆ ಮೀನು ಓವರ್ ಲೋಡ್ ಆಗಿದ್ದರಿಂದಾಗಿ ಬಂದರಿಗೆ ಬರುವುದಕ್ಕೆ ಕಷ್ಟಸಾಧ್ಯವಾಗಿತ್ತು. ಈ ವೇಳೆಯಲ್ಲಿ ಬೀಸಿದ ಭಾರಿ ಗಾಳಿಯಿಂದಾಗಿ ಬೋಟ್ ಮಗುಚಿದೆ ಎನ್ನಲಾಗುತ್ತಿದೆ.
ಮಗುಚಿ ಬಿದ್ದ ಪರಿಣಾಮ 6 ಮಂದಿ ಸಮುದ್ರದಲ್ಲಿ ನಾಪತ್ತೆಯಾಗಿದ್ದು, 19ಮಂದಿಯನ್ನು ರಕ್ಷಣೆ ಮಾಡಲಾಗಿದೆ. ನಾಪತ್ತೆಯಾದವರು ಕಸಬಾ ಬೆಂಗರೆ ಸುತ್ತಮುತ್ತಲ ನಿವಾಸಿಗಳೆಂದು ತಿಳಿದು ಬಂದಿದೆ.