ಮುಂಬೈ : ಮದುವೆಗೆ ನಿರಾಕರಿಸಿದ ಕಾರಣಕ್ಕೆ ನಿರ್ಮಾಪಕನೋರ್ವ ನಟಿಗೆ ಚಾಕುವಿನಿಂದ ಇರಿದ ಘಟನೆ ಮುಂಬೈನಲ್ಲಿ ನಡೆದಿದ್ದು, ನಟಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಿಂದಿ ಕಿರುತೆರೆಯಲ್ಲಿ ಹೆಸರು ಮಾಡಿದ್ದ ನಟಿ ಮಾಳವಿ ಮಲ್ಹೋತ್ರ ಚಾಕು ಇರಿತಕ್ಕೆ ಒಳಗಾದವರು. ನಿರ್ಮಾಪಕ ಯೋಗೀಶ್ ಕುಮಾರ್ ಎಂಬಾತ ಇದೀಗ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ. ದುಬೈಗೆ ತೆರಳಿದ್ದ ಮಾಳವಿ ಇತ್ತೀಚಿಗಷ್ಟೇ ವಾಪಾಸಾಗಿದ್ದರು. ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಮುಂಬೈನ ವರ್ಸೋವಾ ಏರಿಯಾದ ಕೆಫೆಯೊಂದರಿಂದ ಮನೆಗೆ ಹೊರಟಿದ್ದರು.

ಆಗ ಐಷಾರಾಮಿ ಕಾರಿನಲ್ಲಿ ಬಂದ ಯೋಗೇಶ್‌ಕುಮಾರ್, ಮಾಳವಿಯನ್ನು ತಡೆದಿದ್ದಾನೆ. ನಟಿಯೊಂದಿಗೆ ಮಾತನಾಡಲು ಮುಂದಾಗಿದ್ದ, ಆದರೆ ಮಾಳವಿ ತನಗೆ ನಿನ್ನೊಂದಿಗೆ ಮಾತನಾಡಲು ಇಷ್ಟವಿಲ್ಲ. ಹೀಗಾಗಿ ನನ್ನನ್ನ ಫಾಲೋ ಮಾಡ್ಬೇಡಾ ಅಂತಾ ಹೇಳಿದ್ದಾಳೆ. ಇಷ್ಟಕ್ಕೆ ಸಿಟ್ಟಾದ ಯೋಗೀಶ್ ಕುಮಾರ್ 4 ಬಾರಿ ಚಾಕುವಿನಿಂದ ಇರಿದಿದ್ದಾನೆ.

ಮಾಳವಿ ಮಲ್ಹೋತ್ರ ಹೊಟ್ಟೆ ಹಾಗೂ ಕೈ ಗೆ ಗಾಯವಾಗಿದ್ದು, ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಯೋಗೀಶ್ ಕುಮಾರ್ ಹಾಗೂ ಮಾಳವಿ ಮಲ್ಹೋತ್ರ ಹಲವು ವರ್ಷಗಳಿಂದ ಪರಿಚಿತರು.

ಯೋಗೀಶ್ ಕುಮಾರ್ ಮಾಳವಿಯನ್ನು ಮದುವೆಯಾಗೋದಕ್ಕೆ ಬಯಸಿದ್ದ. ಆದರೆ ಮಾಳವಿಗೆ ಇಷ್ಟವಿರಲಿಲ್ಲ. ಮಾತ್ರವಲ್ಲ ಯೋಗೀಶ್ ಕುಮಾರ್ ಜೊತೆಗೆ ಮಾತನಾಡುವುದನ್ನೇ ಮಾಳವಿ ನಿಲ್ಲಿಸಿದ್ದಾರೆ. ಇದೇ ಕಾರಣದಿಂದಲೇ ಈ ಕೃತ್ಯವನ್ನೆಸಗಿದ್ದಾನೆ ಅಂತಾ ಮಾಳವಿ ಪೊಲೀಸರಿಗೆ ತಿಳಿಸಿದ್ದಾರೆ.

ಪ್ರಕರಣ ದಾಖಲ ಮಾಡಿಕೊಂಡಿರುವ ವಾರ್ಸೋವಾ ಠಾಣೆಯ ಪೊಲೀಸರು ಆರೋಪಿ ಯೋಗೀಶ್ ಕುಮಾರ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ನಟಿ ಮಾಳವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗುತ್ತಿದೆ.