ಮುಂಬೈ: ನಟರು,ರಾಜಕಾರಣಿಗಳ ಮಕ್ಕಳು ಅತ್ಯಾಚಾರ ಆರೋಪದಲ್ಲಿ ಸಿಲುಕೋದು ಇದೇ ಮೊದಲಲ್ಲ. ಈಗ ಬಾಲಿವುಡ್ ನಟ ಹಾಗೂ ಮಾಜಿ ಸಂಸದ ಮಿಥುನ್ ಚಕ್ರವರ್ತಿ ಪುತ್ರನ ವಿರುಧ್ಧ ಅತ್ಯಾಚಾರದ ಆರೋಪ ಕೇಳಿಬಂದಿದೆ.

ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್ ವಿರುದ್ಧ ಅತ್ಯಾಚಾರ ಆರೋಪ ಎಸಗಿರುವ ಮಾಡೆಲ್ ಒಬ್ಬರು ನ್ಯಾಯಕೋರಿ ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಮುಂಬೈ ಮೂಲದ ಮಾಡೆಲ್ ಒಬ್ಬರು ೨೦೧೫-೨೮ ರವರೆಗೆ ಮಹಾಕ್ಷಯ್ ನನ್ನೊಂದಿಗೆ ಸಂಬಂಧದಲ್ಲಿದ್ದರು. ಬಲವಂತವಾಗಿ ನನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದರು. ಮದುವೆಯಾಗುವುದಾಗಿ ನಂಬಿಸಿದ್ದರು ಎಂದು ಆರೋಪಿಸಿದ್ದಾರೆ.

ನಾನು ಗರ್ಭಿಣಿಯಾದ ಮೇಲೆ ಮದುವೆಯಾಗಲು ನಿರಾಕರಿಸಿದ್ದಲ್ಲದೇ, ಬಲವಂತವಾಗಿ ಮಾತ್ರೆ ನೀಡಿ ನನಗೆ ಗರ್ಭಪಾತ ಮಾಡಿಸಿದ್ದಾರೆ ಎಂದಿದ್ದಾರೆ.

ಅಲ್ಲದೇ ಈ ವಿಚಾರವಾಗಿ ಮಹಾಕ್ಷಯ್ ಜೊತೆ ಮಾತನಾಡಲು ಹೋದಾಗ ಅವರ ತಾಯಿ ಅಡ್ಡಿ ಪಡಿಸಿದ್ರು. ಅಷ್ಟೇ ಅಲ್ಲ ಈ ಸಂಬಂಧ ದೂರು ನೀಡಿದ್ದನ್ನು ಗಮನಿಸಿದ ಅವರ ತಾಯಿ ಯೋಗಿತಾ ಬಾಲಿ ದೂರು ಹಿಂಪಡೆಯುವಂತೆ ಬೆದರಿಕೆ ಹಾಕಿದ್ದರು ಎಂದು ಮಾಡೆಲ್ ಮಿಥುನ್ ಚಕ್ರವರ್ತಿ ಪತ್ನಿ ವಿರುದ್ಧವೂ ಆರೋಪಿಸಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಪ್ರಾಥಮಿಕ ಸಾಕ್ಷಿ ಆಧಾರದ ಮೇಲೆ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್ ಚಕ್ರವರ್ತಿ ಹಾಗೂ ಪತ್ನಿ ಯೋಗಿತಾ ಬಾಲಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಚಿಸಿದೆ.

ನ್ಯಾಯಾಲಯದ ಆದೇಶದಂತೆ ಓಶಿವರ್ ಪೊಲೀಸರು ಮಾಜಿ ಸಂಸದರ ಪುತ್ರ ಹಾಗೂ ಪತ್ನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಸಂಸದ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಪುತ್ರನ ವಿರುದ್ಧವೂ ಇದೇ ರೀತಿಯ ಅತ್ಯಾಚಾರ ಪ್ರಕರಣ ಕೇಳಿಬಂದಿತ್ತು.