ಮನೀಶ್ ಶೆಟ್ಟಿ ಹತ್ಯೆ ಪ್ರಕರಣ : ನಾಲ್ವರ ಬಂಧನ, ಇಬ್ಬರ ಮೇಲೆ ಪೊಲೀಸ್ ಫೈರಿಂಗ್

ಬೆಂಗಳೂರು : ಬಾರ್ ಮಾಲೀಕ ಮನೀಶ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಬಂಧನದ ವೇಳೆಯಲ್ಲಿ ಇಬ್ಬರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಕೊಡಗಿನ ಶಶಿಕಿರಣ್ ಅಲಿಯಾಸ್ ಮುನ್ನಾ (45 ವರ್ಷ), ಮಂಗಳೂರಿನ ಗಣೇಶ್ (39 ವರ್ಷ), ನಿತ್ಯ (29 ವರ್ಷ) ಮತ್ತು ಮಂಗಳೂರಿನ ಅಕ್ಷಯ್ (32 ವರ್ಷ) ಎಂಬವರೇ ಹತ್ಯೆ ಪ್ರಕರಣದ ಆರೋಪಿಗಳಾಗಿದ್ದಾರೆ. ಆರೋಪಿಗಳೆಲ್ಲರೂ ಬೆಂಗಳೂರಿನ ಗಾಂಧಿನಗರದ ಲಾಡ್ಜ್​ವೊಂದರಲ್ಲಿ ಅಡಗಿದ್ದಾರೆನ್ನುವ ಕುರಿತು ಖಚಿತ ಮಾಹಿತಿ ಮೇರೆಗೆ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ ಬಂಧಿಸಿದ್ದಾರೆ.

ಮನೀಶ್ ಶೆಟ್ಟಿಯನ್ನು ಹತ್ಯೆಗೈಯಲು ಉಪಯೋಗಿಸಿದ್ದ ಮಾರಕಾಸ್ತ್ರಗಳನ್ನ ಜಫ್ತಿ ಮಾಡಲು ಹೊಸೂರು ರಸ್ತೆಯ ಬಾರ್ಲೆನ್ ಸ್ಮಶಾನ ಬಳಿ ಪೊಲೀಸರು ತಪಾಸಣೆ ಮಾಡುವಾಗ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದಾರೆ. ಆಗ ಪೊಲೀಸರು ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಿದ್ದಾರೆ. ಆಗ ಎ1 ಆರೋಪಿ ಶಶಿಕಿರಣ್ ಹಾಗೂ ಎ4 ಆರೋಪಿ ಅಕ್ಷಯ್ ಕಾಲಿಗೆ ಗುಂಡು ತಗುಲಿದೆ. ಗಾಯಗೊಂಡ ಅವರಿಬ್ಬರನ್ನು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅ.15 ರಂದು ಗುರುವಾರ ರಾತ್ರಿ ಬ್ರಿಗೇಡ್ ರಸ್ತೆಯಲ್ಲಿರುವ ಡುಯೆಟ್ ಬಾರ್​ನ ಮಾಲೀಕ ಮನೀಶ್ ಶೆಟ್ಟಿ ಅವರನ್ನು ನಾಲ್ವರು ಆರೋಪಿ ಗಳು ಹತ್ಯೆಗೈದಿದ್ದರು. ಬ್ರಿಗೇಡ್ ರಸ್ತೆ ಬಳಿಯ ರೆಸ್ಟ್ ಹೌಸ್ ಪಾರ್ಕ್ ರಸ್ತೆಯಲ್ಲಿ ಮನೀಶ್ ಶೆಟ್ಟಿ ಮೇಲೆ ಸಿಂಗಲ್ ಬ್ಯಾರಲ್ ಲೋಡಿಂಗ್ ಗನ್​ನಿಂದ ಆರೋಪಿಗಳು ಮೊದಲಿಗೆ ಫೈರಿಂಗ್ ಮಾಡಿದ್ದರು. ಬಳಿಕ ವಾಪಸ್ ಬಂದು ಮಚ್ಚಿನಿಂದ ನಾಲ್ಕು ಬಾರಿ ಕೊಚ್ಚಿ ಹೊರಟು ಹೋದರು. ಕೊಲೆಗೆ ಬಳಸಿದ್ದ ಮಚ್ಚನ್ನು ಅವರು ಹೊಸೂರು ರಸ್ತೆಯ ಸ್ಮಶಾನದಲ್ಲಿ ಎಸೆದು ಹೋಗಿದ್ದರು. ಈ ಮಾರಕಾಸ್ತ್ರ ವನ್ನು ಪರಿಶೀಲಿಸುವಾಗ ಮತ್ತು ಸ್ಥಳದ ಮಹಜರು ಮಾಡುವಾಗ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದರೆನ್ನಲಾಗಿದೆ.

ಆರೋಪಿ ಶಶಿಕಿರಣ್ ಅಲಿಯಾಸ್ ಮುನ್ನಾ ಮನೀಶ್ ಶೆಟ್ಟಿ ಹತ್ಯೆ ಪ್ರಕರಣದ ಮಾಸ್ಟರ್​ಮೈಂಡ್ ಎನ್ನಲಾಗಿದೆ. 2000 ರಲ್ಲಿ ಮಂಗಳೂರಿನ ಉಲ್ಲಾಳದಲ್ಲಿ ನಡೆದ ಡಬಲ್ ಮರ್ಡರ್, 2002ರಲ್ಲಿ ಕಾರ್ಕಳ ಹಲ್ಲೆ ಪ್ರಕರಣ, 1998ರಲ್ಲಿ ಕದ್ರಿ ಠಾಣಾ ವ್ಯಾಪ್ತಿಯಲ್ಲಿ 307ರ ಅಡಿಯಲ್ಲಿ ದಾಖಲಾದ ಪ್ರಕರಣ ಸೇರಿ ಹಲವು ಪ್ರಕರಣಗಳಲ್ಲಿ ಆತ ಆರೋಪಿಯಾಗಿದ್ದಾನೆ. ಮನೀಶ್ ಶೆಟ್ಟಿ ಸಾವಿನ ಬೆನ್ನಲ್ಲೇ ಹತ್ಯೆಗೆ ಭೂಗತ ಜಗತ್ತಿನ ನಂಟು ಇದೆ ಅನ್ನೋ ಮಾತು ಕೇಳಿಬಂದಿತ್ತು. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆಸಲಾಗಿದೆ ಎನ್ನಲಾಗುತ್ತಿದೆ.

Comments are closed.