ಮುಂಬೈ: ಸೋಷಿಯಲ್ ಮೀಡಿಯಾದಲ್ಲಿ ಸಾಮಾಜಿಕ ಸ್ವಾಸ್ಥ್ಯ ಕದಡಿದ ಹಾಗೂ ಕೋಮು ಭಾವನೆ ಕೆರಳಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ಬ್ರೇವ್ ಗರ್ಲ್ ಕಂಗನಾ ಹಾಗೂ ಅವರ ಸಹೋದರಿಗೆ ಸಂಕಷ್ಟ ಎದುರಾಗಿದೆ. ಮೊದಲನೇ ನೊಟೀಸ್ ಗೆ ಉತ್ತರಿಸದ ಕಾರಣ ಎರಡನೇ ಬಾರಿಗೆ ಸಮನ್ಸ್ ಜಾರಿಯಾಗಿದೆ.

ಮುಂಬೈ ಪೊಲೀಸರು ಕಂಗನಾ ರನಾವುತ್ ಹಾಗೂ ರಂಗೋಲಿ ರನಾವುತ್ ಗೆ ನವೆಂಬರ್ 10 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ. ಅಕ್ಟೋಬರ್ 21 ರಂದು ಕಂಗನಾ ಹಾಗೂ ರಂಗೋಲಿಯವರಿಗೆ ಮೊದಲ ನೊಟೀಸ್ ಜಾರಿ ಮಾಡಲಾಗಿತ್ತು.

ಆದರೆ ಇಬ್ಬರು ಸಹೋದರರಿಯರು ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಎರಡನೇ ಸಮನ್ಸ್ ಜಾರಿ ಮಾಡಲಾಗಿದ್ದು, ನವೆಂಬರ್ 10 ರಂದು ಹಾಜರಾಗುವಂತೆ ಮೊದಲೆ ಸೂಚನೆ ನೀಡಲಾಗಿದೆ. ಅಲ್ಲದೇ, ಸೋಷಿಯಲ್ ಮೀಡಿಯಾದಲ್ಲಿ ಸಮುದಾಯಗಳನ್ನು ಬೇರ್ಪಡಿಸುವ ಪ್ರಯತ್ನ ಮಾಡಲಾಗಿದೆ ಎಂದ ಆರೋಪವನ್ನು ಉಲ್ಲೇಖಿಸಲಾಗಿದೆ.

ಬಾಲಿವುಡ್ ನಿರ್ದೇಶಕರೊಬ್ಬರು ಕಂಗನಾ ಹಾಗೂ ಅವರ ಸಹೋದರಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಸಾಮಾಜಿಕ ಸ್ವಾಸ್ಥ್ಯ ಕದಡುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಸಾದಂರ್ಭಿಕ ಸಾಕ್ಷ್ಯ ಪರಿಶೀಲಿಸಿ ಇಬ್ಬರು ಸಹೋದರರಿಯರ ವಿರುದ್ಧ ಪ್ರಕರಣಕ್ಕೆ ಅನುಮತಿ ನೀಡಿತ್ತು.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ ವಿರುದ್ಧ ಸಮರ ಸಾರಿರುವ ಕಂಗನಾ, ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಲ್ಲದೇ, ಬಾಲಿವುಡ್ ನ್ನು ಆಳುತ್ತಿರುವ ವಿವಿಧ ರೀತಿಯ ಭಯೋತ್ಪಾದನೆ ಕೊನೆಗೊಳ್ಳಬೇಕು ಎಂದಿದ್ದರು.